ಮಡಿಕೇರಿ, ಡಿ. 13: ಮಾನವ ಹಕ್ಕು ಅಂದರೆ ಪುರುಷ ಮತ್ತು ಮಹಿಳೆಗೆ ಸಿಗಬೇಕಾದ ಸಮಾನತೆ ಮತ್ತು ಭಾತೃತ್ವ ಹಾಗೂ ಗೌರವಯುತವಾಗಿ, ಮಾನವೀ ಯತೆಯಿಂದ ಬದುಕುವದೇ ಮಾನವ ಹಕ್ಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಮಾಸ್ಟರ್ ಆರ್‍ಕೆಜಿ ಎಂಎಂ. ಮಹಾಸ್ವಾಮೀಜಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತ ಸಂವಿಧಾನ ನಮಗೆ ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ, ಬದುಕುವ ಹಕ್ಕು, ಯಾವದೇ ಪ್ರದೇಶದಲ್ಲಿ ವಾಸ ಮಾಡುವ ಸ್ವಾತಂತ್ರ್ಯ ನೀಡಿದೆ. ಮಾನವ ಹಕ್ಕುಗಳನ್ನು ಅನುಭವಿಸ ಬೇಕಾದರೆ ಬೇರೆಯವರಿಂದ ಅವರ ಹಕ್ಕುಗಳಿಗೆ ಚ್ಯುತಿ ಬಾರದ ಹಾಗೆ ನಡೆದುಕೊಳ್ಳಬೇಕು. ಜೈಲಿನಲ್ಲಿ ಮನುಷ್ಯನಿಗೆ ಸಿಗಬೇಕಾದ ಸಹಜವಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಖೈದಿಗಳಿಗೂ ನೀಡಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಿಜಯ ಕುಮಾರ್ ಅವರು ಮಾತನಾಡಿ, ಸಂವಿಧಾನ ನಮಗೆ ನೀಡಿರುವ ಹಕ್ಕುಗಳೇ ಮಾನವ ಹಕ್ಕುಗಳು, ಮಾನವ ಹಕ್ಕು ಸಂರಕ್ಷಣೆ ಮಾಡುವದು ಬಹಳ ಮುಖ್ಯ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತೇವೆ. ಆದರೆ ಅವರಿಗೆ ಸಂಸ್ಕøತಿ ಕಲಿಸುವದಿಲ್ಲ. ತಂದೆ ತಾಯಿಗಳು ಮಕ್ಕಳಿಗೆ ಸಂಸ್ಕøತಿಯನ್ನು ಕಲಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಮಾನವ ಹಕ್ಕುಗಳನ್ನು ಸಂರಕ್ಷಣೆ ಮಾಡುವದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕೆಲವು ಕಚೇರಿಯಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಸಾರ್ವಜನಿಕರು ತಿಳಿದುಕೊಂಡರೆ ಮಾನವ ಹಕ್ಕು ಉಲ್ಲಂಘನೆ ಯಾಗುವದಿಲ್ಲ. ಮಾನವ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು 1948 ಡಿಸೆಂಬರ್ 10 ರಂದು ಘೋಷಣೆ ಮಾಡಿತ್ತು. ಮಾನವ ಹಕ್ಕು ಉಲ್ಲಂಘನೆ ಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಖೈದಿಗಳಿಗೂ ಕೂಡ ಸುಪ್ರೀಂಕೋರ್ಟ್ ಮಾರ್ಗ ಸೂಚಿಯಂತೆ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕು. ಮಾನವ ಹಕ್ಕು ಉಲ್ಲಂಘನೆಯಾಗದಂತೆ ನೋಡಿ ಕೊಳ್ಳಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇ ಗೌಡ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕೆ.ವಿ. ಸುರೇಶ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ್,ಆಡಳಿತ ಸಹಾಯಕ ಜಯಪ್ಪ ಇತರರು ಇದ್ದರು.