ಗೋಣಿಕೊಪ್ಪ ವರದಿ, ಡಿ. 12: ಬೊಟ್ಯತ್‍ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ 16 ರಿಂದ ಜಿಲ್ಲಾ ಮಟ್ಟದ ಮುಕ್ತ ಪುತ್ತರಿ ಫುಟ್‍ಬಾಲ್ ಕಪ್ ನಡೆಯಲಿದೆ. ಕುಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 2 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಸುಮಾರು 50 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬೊಟ್ಯತ್‍ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ನಿರ್ದೇಶಕ ಮನೆಯಪಂಡ ಪ್ರಾಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ಮೊದಲ ಬಾರಿಗೆ ಟೂರ್ನಿ ಆಯೋಜಿಸಲಾಗುತ್ತಿದೆ. ತಂಡದಲ್ಲಿ 7 ಆಟಗಾರರಿಗೆ ಅವಕಾಶ ನೀಡಲಾಗುವದು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ, ಪ್ರಥಮ ತಂಡಕ್ಕೆ 15,000 ದ್ವಿತೀಯ ತಂಡಕ್ಕೆ 10,000 ನಗದು ಬಹುಮಾನ ನೀಡಲಾಗುವದು. ಈಗಾಗಲೇ 30 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಮತ್ತಷ್ಟು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಅವರು ಹಿಂದೆ ಇದೇ ಮೈದಾನವನ್ನು ಉದ್ಘಾಟಿಸುವ ಮೂಲಕ ಕ್ರೀಡೆಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಕಳೆದ 30 ವರ್ಷಗಳಿಂದ ಈ ಮೈದಾನದಲ್ಲಿ ಟೂರ್ನಿಗಳು ನಡೆದಿರಲಿಲ್ಲ. ಇದರಿಂದಾಗಿ ಅವರ ಹೆಸರನ್ನು ಉಳಿಸಿ ಪೋಷಿಸುವ ಸಲುವಾಗಿ ಟೂರ್ನಿ ಆಯೋಜಿಸಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಅಧ್ಯಕ್ಷ ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ಕಾರ್ಯದರ್ಶಿ ಮದ್ರೀರ ಹರೀಶ್, ನಿರ್ದೇಶಕರ ಅಚ್ಚಿಯಂಡ ಮನೋಜ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ 9480703687, 8277465036 ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.