ಮಡಿಕೇರಿ ನ. 29 : ಕಳೆದ ಅನೇಕ ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಮಾರ್ಗೋಪಾಯಕ್ಕಾಗಿ ಕೆಲವು ಮಹನೀಯರುಗಳು ಸೇರಿಕೊಂಡು ಸಮಾನ ಮನಸ್ಕ ಚಿಂತನೆಯೊಂದಿಗೆ ಬಾಳುಗೋಡುವಿನಲ್ಲಿ ಕೊಡವ ಸಮಾಜಗಳ ಒಕ್ಕೂಟ ಎನ್ನುವ ಹೆಸರಿನಲ್ಲಿ 2001ರಲ್ಲಿ ಸಮಾಜವನ್ನು ಒಗ್ಗೂಡಿಸಲಾಗಿದೆ. ಕೊಡಗನ್ನು ನಿರಂತರವಾಗಿ ಕಾಡುತ್ತಿರುವ ಜಮ್ಮಾಬಾಣೆ ಸಮಸ್ಯೆ, ಕೊಡವರ ಕೋವಿ ಹಕ್ಕು, ಸೂಕ್ಷ್ಮ ಪರಿಸರ ವಲಯದ ವಿವಾದದ ಬಗ್ಗೆ ಶಾಶ್ವತವಾದ ತೀರ್ಮಾನ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗಿನ ಜನರ ಬಹುಮತದ ತೀರ್ಮಾನಗಳನ್ನು ತಿಳಿಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಇದೊಂದು ವೇದಿಕೆ.

ಕೊಡವ ಜನಾಂಗದ ಪದ್ಧತಿ ಪರಂಪರೆ, ಕಲೆ, ಕ್ರೀಡೆ ಮುಂತಾದವುಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಆಚರಣೆಗೆ ತರುವ ಉದ್ದೇಶದಿಂದ ದೊಡ್ಡದಾದ ಕಲಾಮಂದಿರ ಮತ್ತು ಸಭಾಭವನ, ಊಟದ ಸಭಾಂಗಣವನ್ನು ನಿರ್ಮಿಸಲಾಗಿದೆ. ಕಲೆ, ಕ್ರೀಡೆ, ಮತ್ತು ನೃತ್ಯ ಎಂಬ ಹೆಸರಿನ ಸಭಾ ಭವನದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಸಿಕೊಂಡು ಬರಲಾಗುತ್ತಿದೆ.

2001ರಲ್ಲಿ ಸ್ಥಾಪಿಸಲಾದ ಕೊಡವ ಸಮುದಾಯದ ಕಟ್ಟಡಗಳಿಗೆ ಸರ್ಕಾರದಿಂದ 5 ಕೋಟಿ ಅನುದಾನ ಲಭ್ಯವಾಗಿತ್ತು. ಉಳಿದಂತೆ ದಾನಿಗಳು ಮತ್ತು ಸದಸ್ಯರ ಸಹಕಾರದಿಂದ ಒಟ್ಟು 10 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕ್ರೀಡೆಗೆ ಸಂಬಂಧ ಪಟ್ಟಂತೆ ಎರಡು ಆಟದ ಮೈದಾನಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಅನೂಕೂಲ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಯಿ ಕ್ರೀಡಾ ಸಂಸ್ಥೆಯ ಮಾದರಿ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. 2001 ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಮೈಸೂರು ಕೊಡವ ಸಮಾಜದ ಅಧ್ಯಕ್ಷರಾದ ಬಲ್ಲಚಂಡ ನಾಣಯ್ಯ ಅವರು ಮೂರು ವರ್ಷಗಳ ಕಾಲ ದುಡಿದು ಒಕ್ಕೂಟದ ಅಭ್ಯುದಯಕ್ಕಾಗಿ ಸಹಕರಿಸಿದ್ದಾರೆ.

ನಂತರದ ಮೂರು ವರ್ಷಗಳ ಕಾಲ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕೋಡಿರ ಅಪ್ಪಯ್ಯ, ಇದರ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. 2007ರಲ್ಲಿ ಮಲ್ಲೇಂಗಡ ದಾದ ಬೆಳ್ಳಿಯಪ್ಪ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ 2011ರವರೆಗೆ ಒಕ್ಕೂಟದ ಬಲವನ್ನು ಹೆಚ್ಚಿಸಿದ್ದಲ್ಲದೆ ಕಟ್ಟಡಗಳ ಕಾಮಗಾರಿ, ಅತಿಥಿಗಳ ಕೊಠಡಿ ನಿರ್ಮಾಣ ಎಲ್ಲವನ್ನು ಪೂರೈಸಿ ಒಂದು ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ದಾದಾ ಬೆಳ್ಯಪ್ಪ ಅವರ ಅವಧಿಯಲ್ಲಿ ಯೋಧರ ನಾಡಾಗಿರುವ ಕೊಡಗಿನಿಂದ ದೇಶ ಸೇವೆಗಾಗಿ ಹುತಾತ್ಮರಾದವರ ಸ್ಮರಣೆಗಾಗಿ ರೂ. 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಯುದ್ಧ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಆಕರ್ಷಕವಾಗಿ ನಿರ್ಮಾಣವಾಗಿರುವ ಈ ಸ್ಮಾರಕದಲ್ಲಿ ಹುತಾತ್ಮರಾದ ಕೇವಲ ಕೊಡವರು ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಜಾತಿ ಜನಾಂಗದ ವೀರ ಯೋಧರ ಹೆಸರನ್ನು ಅಳವಡಿಸಲಾಗಿದೆ. ಈ ತನಕ ದೊರೆತಿರುವ ಪಟ್ಟಿಯಂತೆ ಇಲ್ಲಿ ಒಟ್ಟು 85 ಜನರ ಹೆಸರು ಇದ್ದು, ವರ್ಷಂಪ್ರತಿ ವೀರ ಯೋಧರನ್ನು ಸ್ಮರಿಸುವ ಕೆಲಸವನ್ನು ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ. 2016 ರಲ್ಲಿ ಕುಟ್ಟ ಕೊಡವ ಸಮಾಜದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಶಾಶ್ವತವಾದ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ಒಕ್ಕೂಟವು ಎಲ್ಲ ಕೊಡವ ಸಮಾಜಗಳ ಕೇಂದ್ರವಾಗಿದ್ದು, ಕೊಡವ ಸಮಾಜದ ಎಲ್ಲಾ ಸದಸ್ಯರು ಇದರ ಸದಸ್ಯರಾಗಿರು ತ್ತಾರೆ. ಸರ್ವ ಸದಸ್ಯರು ಒಕ್ಕೂಟ ಮತ್ತು ಸಮಾಜದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕೆಂದಿದ್ದಲ್ಲಿ ಸಮಾಜದ ಮೂಲಕ ಅಥವಾ ನೇರವಾಗಿ ಒಕ್ಕೂಟಕ್ಕೆ ತಿಳಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಸಮಾಜಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಎಲ್ಲ ಸದಸ್ಯರಿಗೆ ಒಕ್ಕೂಟದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿ ಹೇಳಿ ಒಕ್ಕೂಟದ ಮಾಸಿಕ ಸಭೆಯಲ್ಲಿ ಸಂಯೋಜನೆಗೊಂಡ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ವಿಚಾರ ವಿನಿಮಯ ನಡೆಸಿ ಜನಾಂಗದ ಮೂಲಭೂತ ಸಮಸ್ಯೆಗಳ ಬಗ್ಗೆ ಕಲೆ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳ ಅಭಿವೃದ್ಧಿ ಬಗ್ಗೆ ಸಮಾಜದ ಆಗುಹೋಗುಗಳ ವಿಮರ್ಶೆ ಮತ್ತು ಅಭಿವೃದ್ಧಿ ಪಥದ ಬಗ್ಗೆ ಅವಲೋಕನ ಮಾಡುವದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೊಮ್ಮಕ್ಕಡ ವಿವಾದವೂ ಪ್ರತ್ಯೇಕವಾಗಿದ್ದು ಇದರ ಸದಸ್ಯರು ಎಲ್ಲಾ ಆಗು ಹೋಗುಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಂಘದ ಸದಸ್ಯರು ಸ್ವಚ್ಛತೆಗೂ ವಿಶೇಷ ಆದ್ಯತೆಯನ್ನು ನೀಡುತ್ತಿದ್ದಾರೆ.

ಒಕ್ಕೂಟದ ರಚನೆಯಲ್ಲಿ ಕೊಡವ ಸಮಾಜಗಳ ಪಾತ್ರವೇ ಪ್ರಮುಖ ವಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಇದೆಲ್ಲವು ಕೊಡವ ಸಮಾಜಗಳ ಮೂಲಕವೇ ಹಂಚಿಕೆಯಾಗಿದೆ. ಮುಖ್ಯವಾಗಿ ಅಂತರ ಕೊಡವ ಸಮಾಜಗಳ ಬಾಂಧವ್ಯವೇ ಇದರ ಮುಖ್ಯ ಕಾರ್ಯಸೂಚಿಯಾಗಿದ್ದು, ಕೊಡವ ಸಮಾಜ, ಸಮಾಜದ ಸದಸ್ಯರುಗಳ ಹಿತಕಾಯುವುದೇ ಅಲ್ಲದೆ ಸಮಸ್ಯೆಗಳ ನಿವಾರಣೆ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ. ?ವಾಟೇರಿರ ಶಂಕರಿಪೂವಯ್ಯ,

ಗೌ|| ಕಾರ್ಯದರ್ಶಿ