ರವಿ ಬೆಳೆಗೆರೆಗೆ ಮಧ್ಯಂತರ ಜಾಮೀನು ಬೆಂಗಳೂರು, ಡಿ. 13: ತಮ್ಮ ಸಹೋದ್ಯೋಗಿ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಹಿರಿಯ ಪತ್ರಕರ್ತ ಹಾಗೂ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರಿಗೆ ಸೆಷನ್ಸ್ ಕೋರ್ಟ್ ಷರತ್ತು ಬದ್ದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯದ ಹಿನ್ನೆಲೆ ರವಿ ಬೆಳಗೆರೆ ಅವರಿಗೆ ತಾ. 16 ರವರೆಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಅಲ್ಲದೆ ತನಿಖೆಗೆ ಸಹಕರಿಸುವಂತೆ ನ್ಯಾಯಾಲಯ ರವಿ ಬೆಳಗೆರೆಗೆ ಸೂಚಿಸಿದೆ. ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಸಿಸಿಬಿ ಪೆÇಲೀಸರು ಕಳೆದ ಶನಿವಾರ ರವಿ ಬೆಳಗೆರೆ ಅವರನ್ನು ಬಂಧಿಸಿದ್ದು, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ಒಪ್ಪಿಸಲಾಗಿತ್ತು. ಬಳಿಕ ರವಿ ಬೆಳಗೆರೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಪರೇಶ್ ಮೇಸ್ತಾ ಪ್ರಕರಣ ಸಿಬಿಐ ತನಿಖೆಗೆ

ಬೆಂಗಳೂರು, ಡಿ. 13: ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿರುವ ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಇಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಮೇಸ್ತಾ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ. ಪರೇಶ್ ಮೇಸ್ತಾ ಮರಣೋತ್ತರ ಪರೀಕ್ಷಾ ವರದಿ ಬರಲು ಇನ್ನು 8 ರಿಂದ 10 ದಿನ ಬೇಕು. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ಏನು ಎಂಬದು ತಿಳಿಯುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ವಿಧಾನಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಅನಗತ್ಯ ಆರೋಪಗಳನ್ನು ಮಾಡುತ್ತಿದೆ. ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪ್ರಕರಣದಲ್ಲೂ ಬಿಜೆಪಿ ಹೀಗೆ ಮಾಡಿತ್ತು. ಕೊನೆಗೆ ಸಿಬಿಐ ಸಹ ಕ್ಲೀನ್ ಚಿಟ್ ನೀಡಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಅಮರನಾಥ ಗುಹೆಯಲ್ಲಿ ಮಂತ್ರ ಹೇಳುವಂತ್ತಿಲ್ಲ

ನವದೆಹಲಿ, ಡಿ. 13: ಅಮರನಾಥ ಗುಹೆಯಲ್ಲಿ ಮಂತ್ರಗಳ ಪಠಣಕ್ಕೆ ರಾಷ್ಟ್ರೀಯ ಹಸಿರು ಪೀಠವು ನಿಷೇಧ ಹೇರಿದೆ. ಅಮರನಾಥ ಗುಹಾ ದೇವಾಲಯ ಆಡಳಿತ ಮಂಡಳಿಗೆ ಈ ಕುರಿತಂತೆ ಪೀಠವು ಆದೇಶ ನೀಡಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯಾತ್ರಾರ್ಥಿಗಳಿಗೆ ಸಾಕಷ್ಟು ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಹಿನ್ನೆಲೆ ಹಸಿರು ಪೀಠವು ಕಳೆದ ತಿಂಗಳು ಅಮರನಾಥ ದೇವಾಲಯ ಮಂಡಳಿಯಿಂದ ಆಡಳಿತವನ್ನು ತಾನು ವಹಿಸಿಕೊಂಡಿತ್ತು. ಹೀಗೆ ಆಡಳಿತ ತನ್ನ ವಶಕ್ಕೆ ಬಂದ ಬಳಿಕ ಪೀಠ ಈ ಆದೇಶ ಹೊರಡಿಸಿದೆ. ಬುಧವಾರ, ಮುಖ್ಯ ನ್ಯಾಯಮೂರ್ತಿ ಸ್ವಾತಂತರ್ ಕುಮಾರ್ ನೇತೃತ್ವದ ಎನ್‍ಜಿಟಿ ಪೀಠವು ಗುಹಾ ದೇವಾಲಯದಲ್ಲಿ ಘಂಟಾನಾದ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರುಗಳಷ್ಟು ಎತ್ತರದಲ್ಲಿರುವ ಈ ದೇವಾಲಯ ಪ್ರವೇಶಿಸಲು ಭಕ್ತರು ತಮ್ಮ ಮೊಬೈಲ್ ಮತ್ತು ಇತರ ಲಗೇಜ್‍ಗಳನ್ನು ಕೊನೆಯ ಚೆಕ್‍ಪೆÇೀಸ್ಟ್‍ನಲ್ಲಿ ಇರಿಸಬೇಕಾಗಿತ್ತು.

ಎಸ್‍ಐಯನ್ನು ಹತ್ಯೆ ಮಾಡಿದ ದರೋಡೆಕೋರ

ಚೆನ್ನೈ, ಡಿ. 13: ಚಿನ್ನ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಚೆನ್ನೈನ ಪೆÇಲೀಸ್ ಇನ್ಸ್‍ಪೆಕ್ಟರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ರಾಜಸ್ತಾನದಲ್ಲಿ ನಡೆದಿದೆ. ದರೋಡೆಕೋರರನ್ನು ಬಂಧಿಸುವದಕ್ಕಾಗಿ ಚೆನ್ನೈ ಪೆÇಲೀಸ್ ಇನ್ಸ್‍ಪೆಕ್ಟರ್ ಪೆರಿಯಪಂಡಿ ನೇತೃತ್ವದ ತಂಡ ರಾಜಸ್ತಾನದ ಪಾಲಿ ಜಿಲ್ಲೆಗೆ ತೆರಳಿತ್ತು, ಈ ವೇಳೆ ಶಂಕಿತ ದರೋಡೆಕೋರರನ್ನು ಬೆನ್ನಟ್ಟಿ ಹೋಗಿದ್ದ ಪೆರಿಯಪಂಡಿ ಅವರನ್ನು ಅವರದ್ದೇ ರಿವಾಲ್ವರ್‍ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಚೆನ್ನೈನ ಮದುರಾವೋಯಲ್ ಠಾಣೆಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಪೆರಿಯಪಂಡಿ ಅವರು, ಕಳೆದ ತಿಂಗಳು ಕೊಲಾಥೂರ್ ಎಂಬಲ್ಲಿ ಸುರಂಗ ತೋಡಿ 3.5 ಕೆ.ಜಿ. ಚಿನ್ನ ದೋಚಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದರು. ರಾಜಸ್ತಾನದ ಮರುಭೂಮಿಯ ಸಮೀಪ ದರೋಡೆಕೋರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರಲ್ಲಿ ಒಬ್ಬನನ್ನು ಇನ್ಸ್‍ಪೆಕ್ಟರ್ ಹಿಡಿದಿದ್ದರು. ಹೊರಕ್ಕೆ ಕರೆದುಕೊಂಡು ಬರುತ್ತಿರುವಾಗ ಆತ ರಿವಾಲ್ವರ್ ಕಸಿದುಕೊಂಡು ಪೆÇಲೀಸರ ಮೇಲೆ ಗುಂಡು ಹಾರಿಸಿದ್ದಾನೆ.

ಕಲಬೆರಕೆ ನಂದಿನಿ ತುಪ್ಪ ಮಾರಾಟ

ಬೆಂಗಳೂರು, ಡಿ. 13: ಪರಿಶುದ್ದತೆ ಹಾಗೂ ಸಾಂಪ್ರದಾಯಿಕ ಗುಣಮಟ್ಟಕ್ಕೆ ಹೆಸರಾದ ನಂದಿನಿ ತುಪ್ಪವನ್ನು ಕಲಬೆರೆಕೆ ಮಾಡಿ ಮಾರಾಟ ಮಾಡುತ್ತಿದ್ದ ತಂಡವನ್ನು ಬೆಂಗಳೂರು ಪೆÇೀಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಆಡುಗೋಡಿ ಪೆÇೀಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಹೈದರಾಬಾದ್ ನಿಂದ ತರಿಸಿದ ಯಂತ್ರದಿಂದ ನಕಲಿ ತುಪ್ಪ ತಯಾರು ಮಾಡುತ್ತಿದ್ದ ಮಣಿ ಹಾಗೂ ಆತನ ಸಹಚರರನ್ನು ಅವರು ಬಂಧಿಸಿದ್ದಾರೆ. ಕಲಬೆರೆಕೆ ನಂದಿನಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಮಣಿ ನಂದಿನಿ ಬಾಕ್ಸ್, ಚಿಹ್ನೆ ಬಳಸಿಕೊಳ್ಳುತ್ತಿದ್ದರು. ಇದೀಗ ಮಹತ್ವದ ಕಾರ್ಯಾಚರಣೆ ನಡೆಸಿದ ಪೆÇೀಲೀಸರು ಬಂಧಿತರಿಂದ 800 ಲೀಟರ್ ನಕಲಿ ನಂದಿನಿ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದವರ ಅಮಾನತು

ತುಮಕೂರು, ಡಿ. 13: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಆರೋಪದ ಮೇಲೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೊಮ್ಮಲದೇವಿಪುರದ ಸರ್ಕಾರಿ ಪ್ರೌಢ ಶಾಲೆಯ ಮೂವರು ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡ ಡಿಡಿಪಿಐ ರವಿಶಂಕರ ರೆಡ್ಡಿಯವರು ಮೂವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಸಚ್ಚಿದಾನಂದ ಹಾಗೂ ಶಿಕ್ಷಕರಾದ ಶೇಖ್ ಮುಜಾಮಿಲ್ ಹಾಗೂ ಧನ್ಸಿಂಗ್ ರಾಥೋಡ್ ಎಂಬವರು ಪ್ರವಾಸದುದ್ದಕ್ಕೂ ಪಾನಮತ್ತರಾಗಿಯೇ ಇದ್ದರು. ಅಷ್ಟೇ ಅಲ್ಲ, ಬಾಯಾರಿದ್ದ ಮಕ್ಕಳು ಕುಡಿಯಲು ನೀರು ಕೇಳಿದಾಗ ನೀರಿನ ಬಾಟಲಿಯಲ್ಲಿ ಮದ್ಯ ಮಿಕ್ಸ್ ಮಾಡಿ ಕುಡಿಸಿ ನಾಚಿಕೆಗೇಡಿನ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸನದ ಬೇಲೂರು ಬಳಿ ಟೀ ಕುಡಿಯಲು ಬಸ್ ನಿಲ್ಲಿಸಿದ್ದ ವೇಳೆ ಶಿಕ್ಷಕರು ಈ ಕೃತ್ಯವನ್ನೆಸಗಿದ್ದಾರೆ ಎಂದು ತಿಳಿದು ಬಂದಿದ್ದು, ಮದ್ಯ ಸೇವಿಸಿದ ಬಳಿಕ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೆಲವರು ಪ್ರಜ್ಞೆ ಕಳೆದುಕೊಂಡರೆ ಮತ್ತೆ ಕೆಲವರು ವಾಂತಿ ಮಾಡಿಕೊಂಡಿದ್ದಾರೆ.

ಭರ್ಜರಿ ದ್ವಿಶತಕ ಸಿಡಿಸಿದ ರೋಹಿತ್

ಮೊಹಾಲಿ, ಡಿ. 13: ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿ 3ನೇ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 153 ಎಸೆತದಲ್ಲಿ 12 ಸಿಕ್ಸರ್, 13 ಬೌಂಡರಿ ಸೇರಿದಂತೆ ಅಜೇಯ 208 ರನ್ ಸಿಡಿಸಿದರು. ಮೊದಲ 100 ರನ್ 115 ಎಸತೆಗಳನ್ನು ತೆಗೆದುಕೊಂಡಿದ್ದ ರೋಹಿತ್ ಶರ್ಮಾ ನಂತರದ ಶತಕವನ್ನು ಕೇವಲ 36 ಎಸೆತಗಳಲ್ಲಿ ಸಿಡಿಸಿದ್ದಾರೆ. ಇನ್ನು ರೋಹಿತ್ ಶರ್ಮಾ ವೈಯಕ್ತಿಕ ಗರಿಷ್ಠ ರನ್ ಅನ್ನು ಲಂಕಾ ವಿರುದ್ಧವೇ ಬಾರಿಸಿದ್ದರು. ಕೊಲ್ಕತ್ತಾದ ಈಡೆನ್ ಗಾರ್ಡನ್‍ನಲ್ಲಿ ನಡೆದಿದ್ದ ಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 264 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಪಂದ್ಯದಲ್ಲಿ ಭಾರತ ಜಯಗಳಿಸಿದೆ.