ಕೂಡಿಗೆ, ಡಿ. 13: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತೊರೆನೂರಿನಲ್ಲಿ ಆಯೋಜಿಸಿದ್ದ ಕೃಷಿ ಸಾಹಿತ್ಯ ಸಮಾವೇಶದ ಸಮಾರೋಪ ಸಮಾರಂಭ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್‍ಸಾಗರ್ ಅಧ್ಯಕ್ಷತೆಯಲ್ಲಿ ನಡೆಯಿತು. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ರೈತರಿಗಾಗಿ ಇಂತಹ ಕೃಷಿ ಸಾಹಿತ್ಯ ಸಮಾವೇಶವನ್ನು ಏರ್ಪಡಿಸುವದರಿಂದ ರೈತರು ಒಂದೆಡೆ ಸೇರಿ ಕೃಷಿ ಸಮಸ್ಯೆಗಳನ್ನು ಚರ್ಚಿಸಲು ಅನುಕೂಲವಾಗುತ್ತದೆ ಎಂದರು.

ಕೊಡಗು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಬೆಳೆಯ ಉದ್ದೇಶ ರೈತರಿಗೆ ಮನದಟ್ಟಾಗುವ ರೀತಿಯಲ್ಲಿ ಕೃಷಿ ಚಟುವಟಿಕೆಯ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು ಎಂದರು. ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಕೆ.ವಿ.ಸುರೇಶ್, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ ಮಾತನಾಡಿದರು.

ಈ ಸಂದರ್ಭ ಕೃಷಿ ಸಾಹಿತ್ಯ ಸಮಾವೇಶದ ಅಂಗವಾಗಿ ನಡೆದ ಗ್ರಾಮೀಣ ಕ್ರೀಡೆಗಳಾದ ರಾಗಿ ಬೀಸುವ ಸ್ಪರ್ಧೆ, ಭತ್ತ ಕುಟ್ಟುವ ಸ್ಪರ್ಧೆ, ಮಹಿಳೆಯರ ಹಗ್ಗಜಗ್ಗಾಟ, ಅಳಿಗುಳಿಮನೆ, ಕಟ್ಟೆಮಣೆ, ಕುಂಟೆಬಿಲ್ಲೆ, ಪುರುಷರ ಲಗೋರಿ, ಬುಗುರಿ, ಚಿನ್ನಿದಾಂಡು, ಹಗ್ಗಜಗ್ಗಾಟದ ವಿಜೇತರಿಗೆ ಹಾಗೂ ವಿಶೇಷವಾಗಿ ಭಾಗವಹಿಸಿದ್ದ 20 ಜೊತೆ ಉತ್ತಮ ಎತ್ತುಗಳಿಗೆ ಬಹುಮಾನ ವಿತರಣೆ ನಡೆಯಿತು.

ವಿಚಾರಗೋಷ್ಠಿ

ಇದುವರೆಗೂ ಆಳಿದ ಸರ್ಕಾರಗಳು ರೈತರಿಂದ ಮತ ಪಡೆದು ಅಧಿಕಾರ ನಡೆಸಿದೆ. ಆದರೆ ರೈತರಿಗೆ ನೀಡಿದ ಭರವಸೆಗಳನ್ನು ಪೂರ್ಣಗೊಳಿಸದೆ ಕೃಷಿಯಲ್ಲಿ ಮುನ್ನಡೆಯಲು ಯಾವದೇ ಅವಕಾಶಗಳನ್ನು ನೀಡಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ವಿಧಾನ ಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ರೈತರಿಗೆ ಮೀಸಲಾತಿ ನೀಡುವಂತಾಗಬೇಕು ಎಂದು ಮಡಿಕೇರಿ ಸರಸ್ವತಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕುಮಾರ್ ಹೇಳಿದರು.

ತೊರೆನೂರಿನಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕೃಷಿ ಸಾಹಿತ್ಯ ಸಮಾವೇಶದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಸುಸ್ಥಿರ ಕೃಷಿ ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ರಾಜಶೇಖರ್ ಮಣ್ಣು ಮಾದರಿ ಸಂಗ್ರಣೆ ವಿಧಾನ ಮತ್ತು ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಾತನಾಡಿ, ಮಣ್ಣಿನ ಅವಶ್ಯಕ ಗುಣ ತಿಳಿಯದೆ ಅಗತ್ಯವಿಲ್ಲದ ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಮಣ್ಣಿನ ಗುಣಲಕ್ಷಣಗಳನ್ನು ಪರೀಕ್ಷೆ ಮಾಡಿಸಿ ಅದಕ್ಕನುಗುಣವಾಗಿ ಬೆಳೆ ಪೋಷಕಾಂಶಗಳನ್ನು ನಿರ್ಧರಿಸಿ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ಸುಂಟಿಕೊಪ್ಪ ಪ್ರೌಢಶಾಲಾ ಶಿಕ್ಷಕ ಟಿ.ಜಿ.ಪ್ರೇಮ್‍ಕುಮಾರ್ ಹಾರಂಗಿ ಅಚ್ಚಕಟ್ಟು ಪ್ರದೇಶದ ರೈತರ ಸಮಸ್ಯೆಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು. ದೇಶಿ ಕೃಷಿ ಪದ್ಧತಿಯ ಮೇಲೆ ವಿದೇಶಿ ಸಂಸ್ಕøತಿ ಪರಿಣಾಮದ ಬಗ್ಗೆ ಹೆಬ್ಬಾಲೆ ಪ್ರೌಢಶಾಲಾ ಶಿಕ್ಷಕರಾದ ವೆಂಕಟ್‍ನಾಯಕ್ ಮಾತನಾಡಿದರು. ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಪ್ರಗತಿಪರ ರೈತರಾದ ಕೆ.ಭಾರಧ್ವಾಜ್ ಆನಂದತೀರ್ಥ ವಹಿಸಿದ್ದರು.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಪಿ.ಎನ್.ದೊರೆಯಪ್ಪಗೌಡ, ಕೆ.ಆರ್.ನಗರದ ಲೇಖಕರಾದ ಅರ್ಜುನ್‍ಹಳ್ಳಿ ಪ್ರಸನ್ನಕುಮಾರ್, ಚಿಕ್ಕಅಳುವಾರ ಮಂಗಳೂರು ವಿಶ್ವವಿದ್ಯಾನಿಲಯ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೋ.ಪಿ.ಎಲ್.ಧರ್ಮ ಮಾತನಾಡಿದರು.