ಸೋಮವಾರಪೇಟೆ,ಡಿ.12: ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದಿರುವಂತೆ ದೇಶವಾಸಿಗಳ ಉಸಿರಿನಂತಿರುವ ಕೃಷಿಕರು, ರೈತರನ್ನು ಉಳಿಸಲು ಕೃಷಿ ಭದ್ರತಾ ಕಾಯ್ದೆಯನ್ನು ಸರ್ಕಾರಗಳು ಜಾರಿಗೆ ತರಬೇಕೆಂದು ರಾಜ್ಯ ರೈತ ಸಂಘದ ಮುಖಂಡ ಹಾಗೂ ಮಂಡ್ಯ ಜಿಲ್ಲೆ, ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಭಿಮತ ವ್ಯಕ್ತಪಡಿಸಿದರು.ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ತೊರೆನೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿ ಸಾಹಿತ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಆಹಾರ ಭದ್ರತಾ ಕಾಯ್ದೆ ಜಾರಿಗೆ ತರುವ ಸರ್ಕಾರಗಳು, ಆಹಾರವನ್ನು ಉತ್ಪಾದಿಸುವ ರೈತರ ಭದ್ರತೆ ಬಗ್ಗೆ ಚಿಂತಿಸುತ್ತಿಲ್ಲ. ವಾಣಿಜ್ಯ ಬೆಲೆಗಳಿಗೂ ಕೃಷಿ ನೀತಿ, ಸಾಲ ನೀತಿ ಜಾರಿಗೆ ತರಬೇಕು. ಕೃಷಿ ನೀತಿ ಮಾಡದಿದ್ದರೆ ದೇಶವೇ ಸಾಯುತ್ತದೆ. ಆರ್ಥಿಕವಾಗಿ ಹಳ್ಳಿಗಳು ಬಲಯುತವಾಗಬೇಕು. ರೈತರು ಸಂಘಟನಾತ್ಮಕವಾಗಿ ಇನ್ನಷ್ಟು ಸದೃಢರಾಗಬೇಕು. ಯುವ ಜನಾಂಗ ಪಟ್ಟಣಕ್ಕೆ ವಲಸೆ ಹೋಗಬಾರದು ಎಂದು ಪುಟ್ಟಣ್ಣಯ್ಯ ಕರೆ ನೀಡಿದರು.

ದೇಶದಲ್ಲಿ ಪ್ರತಿದಿನ 20 ಕೋಟಿ ಲೀಟರ್‍ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಆಹಾರ, ತರಕಾರಿ ಉತ್ಪಾದನೆಯನ್ನೂ ದೇಶ ಮುಂದಿದೆ. ರೇಷ್ಮೆ ಉತ್ಪಾದನೆಯಲ್ಲಿ ದೇಶ 2ನೇ ಸ್ಥಾನದಲ್ಲಿದೆ. ಆದರೆ ರೈತರ ಆತ್ಮಹತ್ಯೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. 7ಲಕ್ಷ ರೈತರು ಇದುವರೆಗೆ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ 30 ನಿಮಿಷಕ್ಕೆ ಓರ್ವ ರೈತ ಸಾವನ್ನಪ್ಪುತ್ತಿದ್ದಾನೆ. ರೈತರ ಸಂಕಷ್ಟಗಳಿಗೆ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಇಂದಿಗೂ ರಾಜ್ಯದಲ್ಲಿ 85 ಲಕ್ಷ ಬಿಪಿಎಲ್ ಕುಟುಂಬಗಳಿವೆ. ಇವರನ್ನು ಇಲ್ಲಿಯವರೆಗೂ ಬಡವರಾಗಿಯೇ ಇಟ್ಟವರು ಯಾರು? ಸರ್ಕಾರಗಳು ಯಾಕೆ ಬಡವರ ಪರ ನಿಲ್ಲುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕೃಷಿಕರು, ಕೂಲಿ ಕಾರ್ಮಿಕರು, ರೈತರಿಗೂ ವೇತನ ಆಯೋಗ ರಚಿಸಬೇಕು. ದೇಶದಲ್ಲಿ ಕೃಷಿ ನೀತಿ ಜಾರಿಗೆ ತರಬೇಕು. ಊಟ ಮಾಡುವವರೆಲ್ಲರೂ ಕೃಷಿಕರೇ ಆಗಿದ್ದಾರೆ. ಎಲ್ಲಾ ಧರ್ಮದವರನ್ನೂ ಕಾಯುತ್ತಿರುವದು ಕೃಷಿಕ ಧರ್ಮ ಮಾತ್ರ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರೈತರು ಉತ್ಪಾದಿಸುವ ಬೆಳೆಗಳಿಗೆ ಉತ್ಪಾದನಾ ವೆಚ್ಚವನ್ನು ನೀಡುವ ಬಗ್ಗೆ ಸರ್ಕಾರ ಚಿಂತಿಸಬೇಕು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯಬೇಕು. ಪರಿಸರವನ್ನು ಉಳಿಸುವ ಮೂಲಕ ಸಮೃದ್ಧ ಕೃಷಿಯತ್ತ ಚಿತ್ತ ಹರಿಸಬೇಕು ಎಂದರು.

ರೈತರು ತಮ್ಮ ಬಜೆಟ್‍ಗೆ ಅನುಗುಣವಾಗಿ ಜೀವನ ನಿರ್ವಹಿಸಬೇಕು. ಶಿಕ್ಷಣ, ಸಾರಿಗೆ, ವಿದ್ಯುತ್ ಸೌಕರ್ಯಗಳು ಎಲ್ಲರಿಗೂ ತಲುಪಬೇಕು. ರೈತರು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಬಾರದು. ಪ್ರಧಾನಿ ಮೋದಿ ಅವರು ಮಹಿಳೆಯರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕೃಷಿಯಿಂದಲೇ ಸಂಸ್ಕøತಿಯ ಉಗಮವಾಗಿದೆ. ಸಂಸ್ಕøತಿಯ ಉಳಿವು ಹಳ್ಳಿಗಳಿಂದ ಆಗುತ್ತಿದೆ. ದೇಶದ ಜನರನ್ನು ಗಡಿ ಕಾಯುವ ಸೈನಿಕರಂತೆಯೇ ಕೃಷಿಕರು ಕಾಪಾಡುತ್ತಿದ್ದಾರೆ. ಸೈನಿಕರು ಮತ್ತು ಅವರ ಕುಟುಂಬದವರಿಗೆ ಸಿಗುವ ಸವಲತ್ತುಗಳು ರೈತರು ಮತ್ತು ಅವರ ಕುಟುಂಬಕ್ಕೂ ಸಿಗುವಂತಾಗಬೇಕು ಎಂದು ಅಭಿಪ್ರಾಯಿಸಿದರು.

ಕಸಾಪ ರಾಜ್ಯ ಕಾರ್ಯದರ್ಶಿ ಚನ್ನೇಗೌಡ ಮಾತನಾಡಿ, ರೈತರಿಂದಲೇ ದೇಶ-ಭಾಷೆ ಉಳಿದಿದೆ. ಆಹಾರ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ರೈತರ ಬದುಕು ಮಾತ್ರ ಹಸನಾಗುತ್ತಿಲ್ಲ ಎಂದು ವಿಷಾದಿಸಿದರು.

ವಿಜಯ್ ಮಲ್ಯ ಅವರ ಸಾಲ ವಸೂಲಾತಿ ಮಾಡಲು ಸಾಧ್ಯವಾಗದ ಸರ್ಕಾರಗಳು, ರೈತರ ಸಾಲ ಮರುಪಾವತಿಗೆ ಮನೆ ಮುಂದೆ ತಮಟೆ ಬಡಿಯುತ್ತಿವೆ. ಇದರಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ರೈತರ ಜಮೀನು ಅಳೆದು ಕೊಡಲಾಗುತ್ತಿದೆ. ಇದು ದೇಶದ ದುರಂತ. ರೈತರೂ ಸಹ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಹಾರಂಗಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಚೌಡೇಗೌಡ, ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಜಿಲ್ಲಾ ಕೋಶಾಧಿಕಾರಿ ಮರುಳೀಧರ್, ಜಿ.ಪಂ. ಮಾಜೀ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಚೆಟ್ಟಳ್ಳಿ ಸಂಶೋಧನಾ ಕೇಂದ್ರದ ಡಾ. ದೊರೆಯಪ್ಪ ಗೌಡ, ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್, ಪ್ರಮುಖರಾದ ಚನ್ನಬಸಪ್ಪ, ಚಂದ್ರಪ್ಪ, ಚಂದ್ರಶೇಖರ್, ಮಂಡ್ಯದ ಉಮಾಶಂಕರ್, ಟಿ.ಬಿ. ಜಗದೀಶ್, ಚಿಕ್ಕಯ್ಯ, ವೆಂಕಟಾಚಲ, ಶಿವಾನಂದ್, ಪಾಂಡುರಂಗ, ಧರ್ಮಣ್ಣ, ಹಂಡ್ರಂಗಿ ನಾಗರಾಜ್, ಕೃಷ್ಣೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ದೇಶೀಯ ಕೃಷಿ ಪದ್ಧತಿ ಮೇಲೆ ವಿದೇಶಿ ಸಂಸ್ಕøತಿ ಪರಿಣಾಮ, ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆ ಮತ್ತು ಪರಿಹಾರ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಗ್ರಾಮಸ್ಥರಿಗೆ ಆಯೋಜಿಸಲಾಗಿದ್ದ ವಿವಿಧ ಗ್ರಾಮೀಣ ಕ್ರೀಡಾಕೂಟವನ್ನು ಶಿಕ್ಷಕರುಗಳಾದ ತೊರೆನೂರು ಕೃಷ್ಣಮೂರ್ತಿ, ಪ್ರವೀಣ್, ಕಣಿವೆ ಕರುಂಬಯ್ಯ ಅವರುಗಳು ನಿರ್ವಹಿಸಿದರು. ತೊರೆನೂರು, ಶಿರಂಗಾಲ, ಕಣಿವೆ, ಹೆಬ್ಬಾಲೆ ಭಾಗದಿಂದ ಹಲವಷ್ಟು ಕೃಷಿಕರು, ರೈತ ಮಹಿಳೆಯರು, ಸಾಹಿತ್ಯಾಸಕ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

- ವಿಜಯ್