ನಾಪೆÇೀಕ್ಲು, ಡಿ. 12: ದೇಶದಲ್ಲಿ ಎಲ್ಲಾ ವೃತ್ತಿಗಿಂತಲೂ ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ಆದುದರಿಂದ ವಿದ್ಯಾರ್ಥಿಗಳು ಶಿಕ್ಷಕರನ್ನು ಪೂಜ್ಯ ಭಾವನೆಯಿಂದ ಕಾಣಬೇಕೆಂದು ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅಭಿಪ್ರಾಯಪಟ್ಟರು.

ನಾಪೆÇೀಕ್ಲು ಪದವಿಪೂರ್ವ ಕಾಲೇಜಿನ ವತಿಯಿಂದ ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಹಾಗೂ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ವ್ಯಕ್ತಿಯ ಜೀವನ ರೂಪಿಸಲು, ಜೀವನಕ್ಕೆ ಅರ್ಥ ಕಲ್ಪಿಸಲು, ಬಣ್ಣ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ಅನಾಚಾರ ತಾಂಡವವಾಡುತ್ತಿದೆ. ಯಾರಿಗೂ ಬದ್ಧತೆ ಎಂಬದೇ ಇಲ್ಲ. ಎಲ್ಲರಲ್ಲಿಯೂ ತಾನು, ತನ್ನದೆಂಬ ಸ್ವಾರ್ಥ ಅಡಗಿದೆ. ಸಮಾಜದ ಏಳಿಗೆಯ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ಸಮಾಜದ ಅಭಿವೃದ್ಧಿಗೆ ಉತ್ತಮ ನಾಯಕರ ಅಗತ್ಯವಿದೆ. ಆದುದರಿಂದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮುವದರ ಮೂಲಕ ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಮಾತೃ, ಪಿತೃ, ಗುರು, ಹಿರಿಯರ ಬಗ್ಗೆ ಭಕ್ತಿ ಭಾವ ಹೊಂದಿರಬೇಕು. ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಹೃದಯ ಶ್ರೀಮಂತಿಕೆ ಇರುವವನಿಗೆ ಮಾತ್ರ ಭಗವಂತನ ಕೃಪೆ ಸಾಧ್ಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಪೆÇೀಕ್ಲು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಬಾರ ಪ್ರಾಂಶುಪಾಲೆ ಉದಿಯಂಡ ಪದ್ಮಜಾ ಸುಭಾಷ್, ಶಿಕ್ಷಕ ವೃತ್ತಿಯನ್ನು ನೌಕರಿ ಎಂಬ ಭಾವನೆಯಿಂದ ಮಾಡಬಾರದು. ಇದನ್ನು ಸಮಾಜ ಸೇವೆ ಎಂಬ ದೃಷ್ಟಿಯಿಂದ ಮಾಡಿದರೆ ಹೆಚ್ಚಿನ ಫಲ ದೊರೆಯಲು ಸಾಧ್ಯ. ಮಗುವಿನ ಮನಸ್ಸನ್ನು ಪ್ರಭಾವಿತಗೊಳಿಸಿ ಆತನನ್ನು ದೇಶದ ಉತ್ತಮ ಪ್ರಜೆಯನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅದನ್ನು ಶಿಕ್ಷಕರು ಮನಸ್ಸಾರೆ ಮಾಡಿದರೆ, ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿದ ಆತ್ಮತೃಪ್ತಿ ಲಭಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯ ಕೊಂಬಂಡ ಗಣೇಶ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರ ಸ್ವಾಗತ ನೃತ್ಯ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚೋಕಿರ ಪ್ರಭು ಪೂವಪ್ಪ, ಎನ್.ಎಸ್.ಉದಯ ಶಂಕರ್, ಹೇಮಾವತಿ, ಸರಿತಾ, ವಿದ್ಯಾರ್ಥಿ ನಾಯಕರು ಇದ್ದರು. ಪಲ್ಲವಿ ಮತ್ತು ತಂಡದಿಂದ ಪ್ರಾರ್ಥನೆ, ಪ್ರಭಾರ ಪಾಂಶುಪಾಲೆ ನಳಂದ ಸ್ವಾಗತ, ಉಪನ್ಯಾಸಕಿ ರೀಟಾ ಕೆ.ಎಂ. ಕಾಲೇಜು ವರದಿ ವಾಚಿಸಿ, ಉಪನ್ಯಾಸಕ ದಿವಾಕರ್ ನಿರೂಪಿಸಿ, ಉಪನ್ಯಾಸಕಿ ಕೆ.ಟಿ.ಕೃಪಾ ವಂದಿಸಿದರು.