ಕುಶಾಲನಗರ, ಡಿ 11: ಕುಶಾಲನಗರ ಪಟ್ಟಣ ಪಂಚಾಯ್ತಿಯ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವ ವ್ಯಾಪಾರಿಗಳು ಮಾರ್ಚ್ 20 ರ ಒಳಗೆ ಮಳಿಗೆಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಪಂಚಾಯ್ತಿ ಕಟ್ಟಡ ತೆರವುಗೊಳಿಸುವದರೊಂದಿಗೆ ನೂತನ ವಾಣಿಜ್ಯ ಸಮುಚ್ಚಯ ನಿರ್ಮಿಸಲು ಪಂಚಾಯ್ತಿ ಆಡಳಿತ ಮಂಡಳಿ ನಿರ್ಧರಿಸಿದ್ದು ಕೆಲವು ವ್ಯಾಪಾರಿಗಳು ಪಂಚಾಯ್ತಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.

ನೂತನ ಕಟ್ಟಡ ನಿರ್ಮಾಣದ ಕಾರ್ಯ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದ್ದು ಪಂಚಾಯ್ತಿ ಕಾರ್ಯಾಲಯ ಸ್ತಳಾಂತರಕ್ಕೆ ನಿರ್ಧರಿಸಲಾಗಿದೆ. ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ತಾತ್ಕಾಲಿಕ ಕಾರ್ಯಾಲಯಕ್ಕೆ ಸಿದ್ಧತೆ ನಡೆಯುತ್ತಿದ್ದು ಕಚೇರಿ ಸ್ಥಳಾಂತರಗೊಳ್ಳಲಿದೆ ಎಂದು ತಿಳಿಸಿದರು.