ಮಡಿಕೇರಿ, ಡಿ. 10: ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ನ್ಯಾಯಬೆಲೆ ಅಂಗಡಿಯೊಂದರಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ದರ ವಸೂಲಿ ಮಾಡಿ ಪಡಿತರ ಸಾಮಗ್ರಿಗಳನ್ನು ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿದೆ ಎಂದು ಸ್ಥಳಿಯ ವಕೀಲ ಬಿ.ಈ. ಸೋಮ ಲೋಕನಾಥ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕವಾಗಿ ಬಹಿರಂಗವಾಗಿದ್ದ ಪಡಿತರ ಅಂಗಡಿಯ ಅವ್ಯವಹಾರದ ಬಗ್ಗೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದ ವೀರಾಜಪೇಟೆ ತಹಶೀಲ್ದಾರರು, ಆರು ತಿಂಗಳುಗಳಾದರೂ ಯಾವದೇ ಕ್ರಮ ಕೈಗೊಂಡಿಲ್ಲ. ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮತ್ತು ಕಾನೂನು ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.
ತೆಲುಗರ ಬೀದಿಯಲ್ಲಿರುವ ಮಂಜುನಾಥ ನ್ಯಾಯಬೆಲೆ ಅಂಗಡಿಯಲ್ಲಿ 38 ರೂ.ಗಳಿಗೆ ಮಾರಾಟ ಮಾಡಬೇಕಿದ್ದ ತೊಗರಿಬೇಳೆಯನ್ನು 60 ರೂ.ಗಳಿಗೆ ಮಾರಾಟ ಮಾಡುವದನ್ನು ವಿರೋಧಿಸಿ ಕಳೆದ ಜೂ. 26 ರಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ್ದ ವೀರಾಜಪೇಟೆ ತಹಶೀಲ್ದಾರರು ಸಾರ್ವಜನಿಕರ ಮೌಖಿಕ ದೂರನ್ನು ಆಲಿಸಿ ನ್ಯಾಯಬೆಲೆ ಅಂಗಡಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ ಇದುವರೆಗೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ವೀರಾಜಪೇಟೆ ನಾಗರಿಕ ವೇದಿಕೆಯ ಸಂಚಾಲಕ ಇ.ರ ದುರ್ಗಾಪ್ರಸಾದ್ ಮಾತನಾಡಿ, ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಅವ್ಯವಹಾರಗಳು ನಡೆಯುತ್ತಿದ್ದು, ವೀರಾಜಪೇಟೆ ತೆಲುಗರ ಬೀದಿಯಲ್ಲಿರುವ ನ್ಯಾಯಬೆಲೆ ಅಂಗಡಿಯ ಅವ್ಯವಹಾರ ಕೇವಲ ಉದಾಹರಣೆ ಮಾತ್ರ ಎಂದು ಆರೋಪಿಸಿದರು.
ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಲಕ್ಷ್ಮಣ್ ಉಪಸ್ಥಿತರಿದ್ದರು.