*ಸಿದ್ದಾಪುರ, ಡಿ.10: ಕೊಟ್ಟಿಗೆಯಲ್ಲಿ ಹಾಲು ಕರೆದು ಮನೆಯ ಹಿಂಬದಿಯಲ್ಲಿರುವ ಗದ್ದೆಯಲ್ಲಿ ಮೇವಿಗಾಗಿ ಕಟ್ಟಿದ್ದ ಹಸುವಿನ ಮೇಲೆ ಕಾಡಾನೆ ಧಾಳಿ ಮಾಡಿದ ಪರಿಣಾಮ ಹಸು ಸತ್ತಿರುವ ಕರುಣಾಜನಕ ಘಟನೆ ನಡೆದಿದೆ.

ಇಂಜಿಲಗೆರೆ ಗ್ರಾಮದ ನಿವಾಸಿ ಡೇವಿಡ್ ಎಂಬರಿಗೆ ಸೇರಿದ ಹಸುವು ಕಾಡಾನೆ ಧಾಳಿಗೆ ಬಲಿಯಾಗಿದೆ. ಪಕ್ಕದ ಕಾಫಿ ತೋಟದಿಂದ ಬಂದ ಕಾಡಾನೆ ಹಸುವಿನ ಮೇಲೆ ಏಕಾಏಕಿ ಧಾಳಿ ಮಾಡಿ ತನ್ನ ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕೆ ತಿವಿದು ಸಾಯಿಸಲಾಗಿದೆ ಎಂದು ಡೇವಿಡ್ ತಿಳಿಸಿದ್ದಾರೆ.

ಕಾರ್ಮಿಕ ಕುಟುಂಬವಾಗಿರುವ ಇವರು ಎರಡು ಹಸುಗಳನ್ನು ಸಾಕಿ ಹಸುವಿನ ಹಾಲಿನಿಂದ ಬದುಕು ಸಾಗಿಸುತ್ತಿದ್ದರು. ಇತ್ತೀಚೆಗಷ್ಟೇ ಇವರ ಹಸುವೊಂದು ನಾಯಿ ಧಾಳಿಗೆ ಬಲಿಯಾಗಿತ್ತು. ಇದೀಗ ಮತ್ತೊಂದು ಹಸುವು ಕಾಡಾನೆ ಧಾಳಿಗೆ ಬಲಿಯಾಗಿದೆ ಅರಣ್ಯ ಇಲಾಖೆ ಪರಿಹಾರ ನೀಡುವದರೊಂದಿಗೆ ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬೆಳೆಗಾರ ರಾಜು ಮಾತನಾಡಿ, ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು, ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ದಿನ ಕಳೆಯುತ್ತಿದ್ದು ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಶಾಶ್ವತವಾಗಿ ಕಾಡು ಪ್ರಾಣಿಗಳನ್ನು ತಡೆಗಟ್ಟುವಂತೆ ಒತ್ತಾಯಿಸಿದ್ದರು. ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ದೇವಯ್ಯ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಹಸುವಿನ ಮಾಲೀಕರಿಗೆ ಪರಿಹಾರ ನೀಡುವದಾಗಿ ಭರವಸೆ ನೀಡಿದರು.

* ಚೇಲಾವರ ಗ್ರಾಮದಲ್ಲಿ ಕಾಫಿ ತೋಟದ ನಡುವೆ ಬೀಡು ಬಿಟ್ಟಿರುವ ಕಾಡಾನೆ ರೈತರ ಕೃಷಿ ಫಸಲು ನಾಶಗೊಳಿಸುವದರೊಂದಿಗೆ, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆಯೆಂದು ಅಲ್ಲಿನ ಬೆಳೆಗಾರ ಬಿ.ಕೆ. ಸುಬ್ರಮಣಿ ತಿಳಿಸಿದ್ದಾರೆ. ನಿತ್ಯ ತೋಟದಲ್ಲಿ ಬಾಳೆ ಇತ್ಯಾದಿ ಕೃಷಿ ಫಸಲು ನಷ್ಟಗೊಳಿಸುತ್ತಿರುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವಂತೆ ಅವರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.