ಗೋಣಿಕೊಪ್ಪ ವರದಿ, ಡಿ. 10: ಸ್ಥಳೀಯ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಹಾಗೂ ಬೆಂಗಳೂರು ಮೆಟ್ರೊ ಲಯನ್ಸ್ ವತಿಯಿಂದ ಇಲ್ಲಿನ ಲಯನ್ಸ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡು ತಪಾಸಣೆ ಮಾಡಿಕೊಂಡರು.

ಉಚಿತವಾಗಿ ಪ್ರಯೋಗಾಲಯ ಪರೀಕ್ಷೆ, ಕ್ಯಾನ್ಸರ್, ಮಧುಮೇಹ, ಡಯಾಬಿಟಿಕ್, ಮೂಳೆ ರೋಗ, ವೀರಾಜಪೇಟೆ ಕೂರ್ಗ್ ಇನ್ಸಿಟ್ಯೂಟ್ ಆಫ್ ಡೆಂಟಲ್ ಕಾಲೇಜು ವತಿಯಿಂದ ದಂತ ಪರೀಕ್ಷೆ ನಡೆಸಲಾಯಿತು. ವೈದ್ಯರುಗಳಾದ ಡಾ. ರಾಘವೇಂದ್ರ, ಮೂಳೆ ತಜ್ಞ ಗಿರೀಶ್, ಆನಂದ್, ಇಸಿಜಿ ಸಹಾಯಕಿ ನಾಗರತ್ನ, ನಿತಿನ್, ಸ್ರ್ತೀ ರೋಗ ತಜ್ಞೆ ಡಾ. ಭಾರತಿ ಆರೋಗ್ಯ ಪರೀಕ್ಷೆ ನಡೆಸಿಕೊಟ್ಟರು.

ಲಯನ್ಸ್ ಜಿಲ್ಲಾ ಗರ್ವನರ್ ಗಿರಿಧರ್ ಉದ್ಘಾಟಿಸಿದರು. ಈ ಸಂದರ್ಭ ಬೆಂಗಳೂರು ಮೆಟ್ರೋ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ನರಸಿಂಹಶಾಸ್ತ್ರಿ, ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಡಿ. ಪೂಣಚ್ಚ, ಕಾರ್ಯದರ್ಶಿ ಪ್ರಣಿತ ಪೂಣಚ್ಚ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಸಿ. ಟಿ ದಿವಾಕರ್, ಬೆಂಗಳೂರು ಮೆಟ್ರೋ ಲಯನ್ಸ್ ಕ್ಲಬ್‍ನ ಕಾರ್ಯದರ್ಶಿ ಕಾರ್ತಿಕ್ ಇದ್ದರು.