ವೀರಾಜಪೇಟೆ, ಡಿ. 9: ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್‍ನ ಸರ್ವತೋಮುಖ ಬೆಳವಣಿಗೆಯಿಂದ ಸಮಾಜ ಸೇವೆಯನ್ನು ಇನ್ನಷ್ಟು ವಿಸ್ತಾರಗೊಳಿಸಲು ಸಾಧ್ಯ. ಇದಕ್ಕಾಗಿ ಸದಸ್ಯರು ಪರಸ್ಪರ ಬಾಂಧವ್ಯದಿಂದ ಸಮಾಜ ಸೇವೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಯನ್ನು ಉತ್ತೇಜಿಸುವಂತಾಗಬೇಕು ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ಗವರ್ನರ್ ಎಚ್.ಆರ್. ಹರೀಶ್ ಹೇಳಿದರು.

ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ‘ರಾಜ್ಯಪಾಲರ ಅಧಿಕೃತ ಭೇಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹರೀಶ್ ಅವರು ಲಯನ್ಸ್ ಸಂಸ್ಥೆ ಶಿಕ್ಷಣ, ಆರೋಗ್ಯ ಹಾಗೂ ಕುಡಿಯುವ ನೀರಿಗೆ ಆದ್ಯತೆ ನೀಡಿದೆ. ಬಡವರಿಗೆ ಸಹಾಯ ಹಸ್ತದೊಂದಿಗೆ ಸಮಾಜದ ಬೇಕು ಬೇಡಿಕೆಗಳ ಈಡೇರಿಕೆ ಯೊಂದಿಗೆ ಸಮಸ್ಯೆಗಳಿಗೂ ಹಂತ ಹಂತವಾಗಿ ಸ್ಪಂದಿಸಲಿದೆ ಎಂದರು.

ಸಮಾರಂಭದಲ್ಲಿ ವೀರಾಜಪೇಟೆ ಲಯನ್ಸ್ ಕ್ಲಬ್‍ನ ಚಾರ್ಟರ್ ಸದಸ್ಯ ಹಿರಿಯ ವಕೀಲ ಸಿ.ಎಚ್. ಕರುಣಾಕರನ್ ಅವರನ್ನು ಸನ್ಮಾನಿಸಲಾಯಿತು.

ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ವಿಕ್ರಂ ಚಂಗಪ್ಪ ಮಾತನಾಡಿ ಕ್ಲಬ್‍ನ ಸದಸ್ಯರು ಪರಸ್ಪರ ಸಹಕಾರದಿಂದ ಸಂಸ್ಥೆಯಿಂದ ಉತ್ತಮ ಸಮಾಜ ಸೇವೆಗೆ ಅವಕಾಶವಾಗಿದೆ. ಸದಸ್ಯರು ಗಳ ಸಹಕಾರದಿಂದ ಸಂಸ್ಥೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಲಯನೆಸ್ ಎಚ್.ಆರ್. ನಮಿತಾ ಹರೀಶ್, ರೀಜನಲ್ ಛೇರ್ಮನ್ ರತ್ನ ಚರ್ಮಣ್ಣ, ಸ್ವರೂಪ್ ಅಯ್ಯಪ್ಪ, ಕ್ಲಬ್‍ನ ಖಜಾಂಚಿ ಪಿ.ಪಿ. ಸುಬ್ಬಯ್ಯ ಉಪಸ್ಥಿತರಿದ್ದರು.

ವಿಕ್ರಂ ಸ್ವಾಗತಿಸಿ, ಕಾರ್ಯದರ್ಶಿ ಬಿ.ಪಿ. ಗಣಪತಿ ವರದಿ ವಾಚನ ಮಾಡಿದರು. ಅಮ್ಮಣಿಚಂಡ ಪ್ರವೀಣ್ ಟೇಲ್ ಟ್ವಿಸ್ಟರ್ ಕಾರ್ಯ ನಿರ್ವಹಿಸಿದರು.

ಸಮಾರಂಭದ ನಂತರ ತ್ರಿಶೂಲ್ ಗಣಪತಿ ಹಾಗೂ ಪ್ರವೀಣ್ ಅವರ ಸಂಗೀತ ಸಂಜೆಯ ಕಾರ್ಯಕ್ರಮ ನಡೆಯಿತು.