ಮಡಿಕೇರಿ, ಡಿ. 9: ಟಿಪ್ಪು ಜಯಂತಿ, ಹನುಮಜಯಂತಿ, ಭಯೋತ್ಪಾದನೆ ಏಕೆ ಬೇಕೆಂಬ ಪ್ರಶ್ನೆಗಳೊಂದಿಗೆ ಸದನದ ಬಾವಿಯಲ್ಲಿ ನೀರಿದ್ದಿದ್ದರೆ ವಿಪಕ್ಷದವರು ಇಳಿಯುತ್ತಿರಲಿಲ್ಲ., ಸ್ವಚ್ಛ ಭಾರತದ ಹೆಸರಿನಲ್ಲಿ ದುರ್ಬಲರ ಶೋಷಣೆ, ಕಳ್ಳನೊಂದಿಗೆ ಹೆಣ್ಣಿನ ಮನಸಿನ ಮಾತುಗಳು ಭಾವನೆಗಳಲ್ಲಿ ಬೆರೆತು ಪದಗಳಾಗಿ ಹೊರಹೊಮ್ಮಿ ಕವನಗಳ ಮೂಲಕ ಜನಮಾನಸವನ್ನು ತಲಪಿದವು.

ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳು ತಮ್ಮ ಮನದ ಭಾವನೆಗಳನ್ನು ತೆರೆದಿಟ್ಟರು. ಕವಯತ್ರಿ ಉಳ್ಳಿಯಡ ಡಾಟಿ ಪೂವಯ್ಯ ಅವರು ತಮ್ಮ ಜಯಂತಿಯ ಕನಸು ಕವನದಲ್ಲಿ ಟಿಪ್ಪು ಜಯಂತಿ, ಹನುಮ ಜಯಂತಿ ಹೆಸರಿನಲ್ಲಿ ತ್ರಿವರ್ಣ ಧ್ವಜವನ್ನು ಕೇಸರಿ-ಹಸಿರು ಎಂದು ಹರಿದು ಹಾದಿ-ಬೀದಿಯಲ್ಲಿ ಎಸೆಯುತ್ತಿದ್ದೀರಾ? ಯಾರಿಗೆ ಬೇಕು ಇದೆಲ್ಲ, ರಕ್ಷಣೆಗೆ ನಿಂತ ಪೊಲೀಸರು ಮನೆ ಸೇರುತ್ತಾರೆಂಬ ಖಾತರಿಯಿಲ್ಲ, ಮೆರವಣಿಗೆಗೆ ಬಂದವನ ತಲೆಗೆ ಕಲ್ಲು ಬೀಳಬಹುದೆಂಬ ಆತಂಕ..., ಎಲ್ಲವೂ ಜಯಂತಿಯಿಂದಲೇ ಎಂದು ಜಯಂತಿ ಎಂಬ ಹೆಣ್ಣಿನ ಕನಸಿನ ಮೂಲಕ ಕನವರಿಸಿದ ಕವನ ಕಣ್ತೆರೆಸುವಂತಿತ್ತು.

ಡಾ. ಜೆ. ಸೋಮಣ್ಣ ಅವರು ‘ಸ್ವಚ್ಛ ಭಾರತದ ವಾರಸುದಾರ’ ಕವನದಲ್ಲಿ ಮದಿರೆಯ ಆಮಿಷದೊಂದಿಗೆ ದುರ್ಬಲದಿಂದ ಶೌಚ ಗುಂಡಿಯನ್ನು ಸ್ವಚ್ಛಗೊಳಿಸುವ, ಸ್ವಚ್ಛತೆಯ ಮೈಲಿಗೆಯನ್ನು ದುರ್ಬಲರು ಶಾಶ್ವತವಾಗಿ ಅಂಟಿಸಿಕೊಂಡು ಬದುಕು ಸಾಗಿಸುವ ಬಗ್ಗೆ ಬೆಳಕು ಚೆಲ್ಲಿದರು.

ವೀರಾಜಪೇಟೆ ವಿಮಲ ದಶರಥ ಅವರು, ತಮ್ಮ ‘ನೀತಿ’ ಕವನದಲ್ಲಿ ದೇಶ ಪ್ರೇಮದ ಬಗ್ಗೆ ಭಯೋತ್ಪಾದನೆಯಿಂದ ದೇಶ ನಲುಗುತ್ತಿರುವ ಬಗ್ಗೆ, ಇದರಿಂದ ಹೊರತಾಗಿ ಭಾರತೀಯರಾಗಿ ಬಾಳಬೇಕೆಂಬ ಸಂದೇಶ ಸಾರಿದರು.

ಚುಟುಕುಗಳ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅವರು, ‘ಸದನದ ಬಾವಿಯಲ್ಲಿ ನೀರಿದ್ದಿದ್ದರೆ ವಿರೋಧ ಪಕ್ಷದವರು ಧುಮುಕುತ್ತಿರಲಿಲ್ಲ...’ ‘ಬೀಟ್ ಹೋಗುತ್ತಿದ್ದ ಪೊಲೀಸಪ್ಪನಿಗೆ ಕರೆ ಮಾಡಿದ ಪತ್ನಿ, ಬರುವಾಗ ಬೀಟುರೂಟ್ ತನ್ನಿ ಎಂದಳು’, ‘ಸೌದೆ ಒಡೆಯುವನಿಗೆ ಏನು ಕೊಡಲಿ ಎಂದು ಯೋಚಿಸುತ್ತಿದ್ದ ಪ್ರೇಮಿಯ ಮನಸಿಗೆ ಹೊಳೆದದ್ದು ಕೊಡಲಿ‘ ಎಂಬಿತ್ಯಾದಿ ಚುಟುಕುಗಳನ್ನು ವಾಚಿಸಿ ಗಮನ ಸೆಳೆದರು.

ಪುದಿಯನೆರವನ ರೇವತಿ ರಮೇಶ್ ಅವರು, ತಮ್ಮ ಮುನ್ನಡೆ ಕವನದಲ್ಲಿ ಹೆಣ್ಣು ಅಬಲೆಯಲ್ಲ, ಮುನ್ನಡೆಯಬೇಕೆಂಬ ಭರವಸೆಯ ಭಾವನೆಗಳನ್ನು ತುಂಬಿದರು. ಕಾಜೂರು ಸತೀಶ್ ಅವರು ‘ನಾನೊಬ್ಬಳೇ ಇದ್ದಾಗ ಕಳ್ಳನಾದರೂ ಬರಬಾರದೇ..?’ ಎಂಬ ಕವನದಲ್ಲಿ ಹುಡುಗಿಯೊಬ್ಬಳು ಕಳ್ಳನೊಂದಿಗೆ ಇರಲು ಬಯಸುವ ಪ್ರಸಂಗವನ್ನು ಎಳೆ ಎಳೆಯಾಗಿ ಬಣ್ಣಿಸಿದರು. ಮೊಬೈಲ್, ಇಂಟರ್‍ನೆಟ್ ಯಾವದೂ ಇಲ್ಲದಾಗ ಬಂದು ಹೋಗು.., ಗೊಬ್ಬರ, ಗ್ಯಾಸ್ ರೇಟ್‍ಗಳ ಬಗ್ಗೆ ಮಾತಾಡಬೇಡ.., ಏನಾದರೂ ಮಾತಾಡುತ್ತಲೇ ಇರು.., ನಾನು ಮಾಡಿದ ಹಲಸಿನ ಚಟ್ನಿ, ರೊಟ್ಟಿ ತಿಂದು ಖಾರ ಎಂದು ನನ್ನ ಮುದ್ದಾಡು, ನಾನು ಸತ್ಯವಂತರ ಕತೆ ಓದುವಾಗ ಅದರಲ್ಲಿರುವ ಸುಳ್ಳನ್ನು ಕದ್ದು ಓಡಿ ಹೋಗು.., ಎಂಬಿತ್ಯಾದಿ ಮುಗ್ಧ ಮನಸಿನ ಹೆಣ್ಣಿನ ಭಾವನೆಗಳನ್ನು ತೆರೆದಿಟ್ಟರು.

ಕಸ್ತೂರಿ ಗೋವಿಂದಮ್ಮಯ್ಯನವರು ಮರಳು ಮಾನವರ ಬಗ್ಗೆ, ಮಣಜೂರು ಶಿವಕುಮಾರ್ ಅವರು ಕವಿತೆಗಳ ಬಗ್ಗೆ ಹಾಗೂ ಪಿ. ವೈಲೇಶ ಅವರು ‘ಕತ್ತಲು ಬೆಳಕು’ ಕವನದಲ್ಲಿ ಚುಮುಚುಮು ಚಳಿ ಕವಿಯ ಕಿರಣದಲ್ಲಿ ಕರಗುತ್ತಾ, ಬೆಳದಿಂಗಳ ನಡುವೆ ನೆರಳು ಮೂಡುವಂತೆ ಬದುಕಿನ ಬಗ್ಗೆ ಬಿಂಬಿಸಿದರು.

ಕವಿತೆ ಮುಗಿಯಬಾರದು

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಾಲಸುಬ್ರಮಣ್ಯ ಕಂಜರ್ಪಣೆ ಅವರು ಮಾತನಾಡಿ, ಕವನ ರಚನೆ ಸುಲಭವÀಲ್ಲ. ಕವಿತೆ ಎಂದಿಗೂ ಮುಗಿಯಬಾರದು. ಕವಿತೆ ಮುಗಿದರೆ ಎಲ್ಲವೂ ಮುಗಿದಂತೆ ಎಂದು ಹೇಳಿದರು. ಅನೇಕರು ಆದರ್ಶಗಳನ್ನು ಹೇಳುತ್ತಾರೆ. ಆದರೆ ವಾಸ್ತವತೆಯನ್ನು ಮರೆಯಲಾರದು. ವಾಸ್ತವದ ನೆಲವನ್ನು ಬಿಟ್ಟು ಹೋಗುವ ಪರಿಸ್ಥಿತಿಗಿಂತ ದುಃಖದ ಸಂಗತಿ ಬೇರೊಂದಿಲ್ಲ ಎಂದರು. ಬರಹಗಾರರು, ಸಾಹಿತಿಗಳು ಏನೇ ಮಾತನಾಡುವಾಗಲು ಬಹಳ ಎಚ್ಚರದಿಂದ ಮಾತನಾಡಬೇಕು. ಇಲ್ಲವಾದಲ್ಲಿ ಹೊರಗಡೆ ಹೋದಾಗ ಪೆಟ್ಟು ಬೀಳುವ ಪರಿಸ್ಥಿತಿಯಿದೆ. ಇಂತಹ ದುಸ್ಥಿತಿ ಬಂದಿರುವ ಆತಂಕಕಾರಿ ಎಂದು ಹಾಸ್ಯಭರಿತವಾಗಿ ಹೇಳಿದರು. -ಸಂತೋಷ್