ಮಡಿಕೇರಿ, ಡಿ. 9: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿರುನಾಣಿ, ಬಾಡಗರಕೇರಿ, ಪರಕಟಗೇರಿ, ತೆರಾಲು, ಪೊರಾಡು ಗ್ರಾಮಗಳನ್ನು ಒಳಗೊಂಡಿರುವ ಮರೆನಾಡ್‍ನಲ್ಲಿ ತಾ. 7 ರಂದು ಹುತ್ತರಿ ಸಂಭ್ರಮ ನಡೆಯಿತು.ಹಬ್ಬದ ಅಂಗವಾಗಿ ನಡೆಯುವ ನಾಡ್ ಮಂದ್‍ನಲ್ಲಿ ಜನತೆ ಸಂಭ್ರಮದಿಂದ ಭಾಗಿಗಳಾಗಿದ್ದರು. ಮರೆನಾಡ್ ಕೊಡವ ಸಮಾಜದ ವತಿಯಿಂದ ಈತನಕ ಬಿರುನಾಣಿಯಲ್ಲಿ ಮಂದ್ ನಡೆಯುತ್ತಿತ್ತು. ಇದೀಗ ಕೊಡವ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಬಾಡಗರಕೇರಿ ಗ್ರಾಮದಲ್ಲಿ ಜಾಗ ಅಧಿಕೃತಗೊಳಿಸಲಾಗಿದೆ. ಈ ಜಾಗದ ಉದ್ಘಾಟನೆಯೊಂದಿಗೆ ಇದೇ ಸ್ಥಳದಲ್ಲಿ ಮಂದ್ ನಡೆಸಲಾಯಿತು. ಜಾಗದ ಮಾಲೀಕ ಕಾಯಪಂಡ ರಾಮು ಪೆಮ್ಮಯ್ಯ, ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ (ಪೊನ್ನುಮಣಿ), ಸಲಹೆಗಾರ ಕಾಳಿಮಾಡ ಮುತ್ತಣ್ಣ, ಕಾರ್ಯದರ್ಶಿ ಮಲ್ಲೇಂಗಡ ಧನಂಜಯ, ಖಜಾಂಚಿ ಕಾಯಪಂಡ ಸುನಿಲ್, ಉಪಾಧ್ಯಕ್ಷ ಕರ್ತಮಾಡ ಮಿಲನ್ ಮೇದಪ್ಪ, ಅಣ್ಣಳಮಾಡ ಲಾಲಾ ಅಪ್ಪಣ್ಣ, ಜಂಟಿ ಕಾರ್ಯದರ್ಶಿ ಸೇರಿದಂತೆ ತಕ್ಕಮುಖ್ಯಸ್ಥರಾದ ಕಾಯಪಂಡ, ಚಂಗಣಮಾಡ, ಬೊಳ್ಳೆರ ಕುಟುಂಬದವರು ಪಾಲ್ಗೊಂಡಿದ್ದರು. ವಿವಿಧ ಗ್ರಾಮಗಳ ತಂಡದಿಂದ ಕೋಲಾಟ, ಉಮ್ಮತ್ತಾಟ್ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ಬಿರುನಾಣಿ, ಬಾಡಗರಕೇರಿ, ಪರಕಟಗೇರಿ, ಪ್ರಾಥಮಿಕ ಶಾಲೆ ಸುಜ್ಯೋತಿ ವಿದ್ಯಾಸಂಸ್ಥೆ, ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಸುಜ್ಯೋತಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪಾಧ್ಯಕ್ಷ ಬೊಳ್ಳೆರ ಪೊನ್ನಪ್ಪ ಸ್ವಾಗತಿಸಿದರು. ಮಲ್ಲೇಂಗಡ ಪೆಮ್ಮಯ್ಯ ನಿರೂಪಿಸಿ, ಗುಡ್ಡಮಾಡ ಚಂಗಪ್ಪ ವಂದಿಸಿದರು.