ಮಡಿಕೇರಿ, ಡಿ. 9: ಜಿಲ್ಲೆಯ ಹದಿನಾರು ಪ್ರೌಢಶಾಲೆಗಳ ನಡುವೆ ನಾಲ್ಕು ದಿನ ನಡೆದ, ಡಾ. ಅಖಿಲ್ ಕುಟ್ಟಪ್ಪ, ಅಶ್ವಥ್ ಐಯ್ಯಪ್ಪ ಜ್ಞಾಪಕಾರ್ಥ ಕ್ರಿಕೆಟ್ ಪಂದ್ಯಾಟದಲ್ಲಿ ಗೋಣಿಕೊಪ್ಪಲಿನ ಕಾಲ್ಸ್ (ಏಚಿಟs) ತಂಡ ಕಾಪ್ಸ್ (ಅoಠಿs) ವಿರುದ್ಧ ಎರಡು ವಿಕೆಟ್‍ಗಳ ರೋಚಕ ಜಯ ಗಳಿಸಿತು.

ನಕ್ಷತ್ರಗಳಂತೆ ಬೆಳಗಿ ಮರೆಯಾದ ರಘು ಮಾದಪ್ಪ ಮತ್ತು ಅನಿತಾ ದಂಪತಿಗಳ ಪುತ್ರರ ಜ್ಞಾಪಕಾರ್ಥ ನಡೆದ ಈ ಕ್ರಿಕೆಟ್ ಪಂದ್ಯಾಟ, ಮಾಯಾ ಪ್ರಪಂಚದ ಕ್ರಿಕೆಟ್‍ಗಿಂತ ಪ್ರೀತಿಯ ದ್ಯೋತಕದಂತಿದೆ ಎಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಅವರು ಹೇಳಿದರು.

ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಮಾತನಾಡಿ, ಅಶ್ವಥ್ ಸಹೋದರರ ಜ್ಞಾಪಕಾರ್ಥ ಕ್ರಿಕೆಟ್ ಶಾಶ್ವತವಾಗಿ ಮುಂದುವರಿಯಲಿದ್ದು, ಕ್ರೀಡಾಪಟುಗಳು ಇದರ ಮೂಲಕ ಕ್ರೀಡಾ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಕೊಡಗು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ಅವರು ಮಾತನಾಡಿ, ಮಾದಪ್ಪ ದಂಪತಿಗಳು ಪುತ್ರಶೋಕದಲ್ಲಿದ್ದರೂ, ಜಿಲ್ಲೆಯಲ್ಲಿ ಕ್ರೀಡಾಪಟುಗಳನ್ನು ಬೆಳೆಸಲು ಮಾಡುತ್ತಿರುವ ಯತ್ನ ಶ್ಲಾಘನಾರ್ಹ ಎಂದರು.

ವೇದಿಕೆಯಲ್ಲಿದ್ದ ಅನಿತಾ ಮಾದಪ್ಪ ಮತ್ತು ಆರತಿ ಕಾರ್ಯಪ್ಪ ವಿಜೇತರಿಗೆ ಟ್ರೋಫಿ ವಿತರಿಸಿದರು.

ವೇದಿಕೆಯಲ್ಲಿ ಪ್ರಾಂಶುಪಾಲ ಸೀನಿವಾಸನ್ ಉಪಸ್ಥಿತರಿದ್ದರು.

ಚಿತ್ರಾ ಹರೀಶ್ ಪ್ರಾರ್ಥನೆ ಹಾಗೂ ಸ್ವಾಗತ ಮಾಡಿದರು. ಕ್ರಿಕೆಟ್ ಪಟು ಹಾಗೂ ಉತ್ತಮ ವೀಕ್ಷಕ ವಿವರಣೆಗಾರ ಆಶುತೋಷ್ ವಂದನಾರ್ಪಣೆ ಮಾಡಿದರು. ಇಂದಿರಾ ನಿರೂಪಣೆ ಮಾಡಿದರು.