*ಸಿದ್ದಾಪುರ, ಡಿ. 8: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೇರವೇರಿಸಿದರು.

ರೂ. 2 ಕೋಟಿ ವೆಚ್ಚದಲ್ಲಿ ಪಂಚಾಯಿತಿ ವ್ಯಾಪ್ತಿಯ ವಾಲ್ನೂರು, ಆಮ್ಮಂಗಾಲ ರಸ್ತೆ ತ್ಯಾಗತ್ತೂರಿನಿಂದ ಕಾನಂಗಾಡ್ ಮಡಿಕೇರಿ ಲಿಂಕ್ ರಸ್ತೆ, ವಾಲ್ನೂರು-ತ್ಯಾಗತ್ತೂರು, ಅಭ್ಯತ್‍ಮಂಗಲ ರಸ್ತೆಗೆ ಭೂಮಿಪೂಜೆ ನೇರವೇರಿಸಿದ್ದು ಆದಷ್ಟು ಬೇಗ ಈ ರಸ್ತೆ ಕಾಮಗಾರಿಯನ್ನು ಉತ್ತಮ ಗುಣಮಟ್ಟದಿಂದ ನಿರ್ಮಿಸಲು ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳು ನಿಗಾವಹಿಸಬೇಕೆಂದು ಶಾಸಕ ರಂಜನ್ ಹೇಳಿದರು.

ಶಾಸಕರ ನಿಧಿ, ಲೋಕೋಪಯೋಗಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿಧಿಯಿಂದ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಕುಶಾಲನಗರ ಎಪಿಎಂಸಿ ಉಪಾಧ್ಯಕ್ಷ ದತ್ತ ವಿಜಯ ಅವರ ಕೋರಿಕೆ ಮೇರೆಗೆ ರೂ. 40 ಲಕ್ಷ ಕುಡಿಯುವ ನೀರಿಗಾಗಿ ಮುಂದಿನ ದಿನಗಳಲ್ಲಿ ಹಣ ಬಿಡುಗಡೆಗೊಳಿಸುವದಾಗಿ ಶಾಸಕರು ಹೇಳಿದರು.

ಚೆಟ್ಟಳ್ಳಿ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಎಂಪಿಎಂಸಿ ಉಪಾಧ್ಯಕ್ಷ ದತ್ತ ವಿಜಯ ಅಭ್ಯತ್‍ಮಂಗಲ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಸುರೇಶ್ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಸದಸ್ಯರುಗಳಾದ ಅಂಚೆಮನೆ ಸುಧಿ, ಕಮಲಮ್ಮ, ಕವಿತಾ, ಸಲೀಂ, ಭುವನೇಂದ್ರ, ಜಿ.ಪಂ. ಮಾಜಿ ಸದಸ್ಯ ವಿ.ಎ. ಶಾಂತಕುಮಾರ್, ಕಾಫಿ ಬೆಳೆಗಾರರಾದ ಪೊನ್ನಪ್ಪ, ಪಿಡಿಓ ನಂಜುಂಡಸ್ವಾಮಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪೀಟರ್, ಮಾಜಿ ಸದಸ್ಯರಾದ ಮನು ಮಹೇಶ, ಹನೀಫ್ ಉಪಸ್ಥಿತರಿದ್ದರು.