ಮಡಿಕೇರಿ, ಡಿ. 8: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಕೊಡಗು ವತಿಯಿಂದ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ತೋಟಗಾರಿಕೆ, ಕಾಫಿ ಪ್ಲಾಂಟೇಶನ್, ರೇಷ್ಮೆ, ಮೀನುಗಾರಿಕೆ, ಹೈನುಗಾರಿಕೆ, ಇತ್ಯಾದಿ ಉದ್ದೇಶಗಳಿಗೆ ಸಾಲ ಸೌಲಭ್ಯವನ್ನು ನೀಡಲು ಅರ್ಹ ಪರಿಶಿಷ್ಟ ವರ್ಗದ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಇಚ್ಚಿಸುವ ಪರಿಶಿಷ್ಟ ವರ್ಗಗಳ ಯರವ, ಕುರುಬ, ಜೇನುಕುರುಬ, ಸೋಲಿಗ ವರ್ಗದ ಅರ್ಜಿದಾರರು ಕಚೇರಿಯಿಂದ ಅರ್ಜಿಗಳನ್ನು ಪಡೆದು ಅದರ ಜೊತೆಗೆ ಯೋಜನೆಗೆ ತಕ್ಕಂತೆ ಅಗತ್ಯವಾದ ದಾಖಲಾತಿಗಳಾದ ಫೋಟೋ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಗುರುತಿನ ಚೀಟಿ, ಆಧಾರ ಕಾರ್ಡ್, ಬ್ಯಾಂಕ್ ಉಳಿತಾಯ ಖಾತೆಯ ಪ್ರತಿ ಹಾಗೂ ಕೋರಿರುವ ಸೌಲಭ್ಯದ ಬಗ್ಗೆ ಹೊಂದಿರುವ ತರಬೇತಿಗಳನ್ನು ದ್ವಿ ಪ್ರತಿಯಲ್ಲಿ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆಯಬಹುದಾಗಿದೆ.

ಜಿಲ್ಲಾ ಕಚೇರಿಯಿಂದ ಈ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿಗಳನ್ನು ಪಡೆದು ದ್ವಿ ಪ್ರತಿಯಲ್ಲಿ ದಾಖಲಾತಿಗಳೊಂದಿಗೆ ಜಿಲ್ಲಾ ಕಚೇರಿಗೆ ತಾ. 23 ರೊಳಗೆ ಸಲ್ಲಿಸುವದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಹೊಸ ಬಡಾವಣೆ, ರೇಸ್ ಕೋರ್ಸ್ ಮಡಿಕೇರಿ, ಕೊಡಗು ಜಿಲ್ಲೆ ಇವರನ್ನು ಹಾಗೂ ದೂರವಾಣಿ ಸಂಖ್ಯೆ 08272-228857 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಅಪ್ರೆಂಟಿಸ್ ತರಬೇತಿಗೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ ವತಿಯಿಂದ ಪ್ರಸಕ್ತ (2017-18) ಸಾಲಿನಲ್ಲಿ ಎಸ್‍ಸಿಪಿ ವಿಶೇಷ ಘಟಕ ಯೋಜನೆಯಡಿ ಪದವಿ-ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿರುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪಡೆದ ಒಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಅಯ್ಕೆ ಮಾಡಲಾಗುವದು. ಅಪ್ರೆಂಟಿಸ್ ತರಬೇತಿ ಅವಧಿ ಮಾರ್ಚ್ 2018 ರವರೆಗೆ ಮಾತ್ರ ಅವಕಾಶವಿದೆ.

ಜಿಲ್ಲ್ಲೆಯ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವದು. ಸ್ಥಳೀಯ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಪಕ್ಕದ ಜಿಲ್ಲಾ ಅಭ್ಯರ್ಥಿಗಳನ್ನು ಪರಿಗಣಿಸಲಾಗುವದು. ಕನ್ನಡ ಹಾಗೂ ಗಣಕ ಯಂತ್ರದ ಜ್ಞಾನ ಹೊಂದಿರಬೇಕು. ವಯೋಮಿತಿ 22 ವರ್ಷದಿಂದ 38 ವರ್ಷದೊಳಗಿರಬೇಕು. ಬೇರೆ ಯಾವದೇ ಉದ್ಯೋಗದಲ್ಲಿ ಇರಬಾರದು. ಅರ್ಜಿಯನ್ನು ತಾ. 12 ರೊಳಗೆ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ, ಇಲ್ಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ಸಮಯದಲ್ಲಿ 08272-228449 ಸಂಪರ್ಕಿಸಬಹುದು ಎಂದು ವಾರ್ತಾಧಿಕಾರಿ ಕೋರಿದ್ದಾರೆ.

ಕ್ರೀಡಾ ವಿದ್ಯಾರ್ಥಿ ವೇತನಕ್ಕೆ

ಪ್ರಸಕ್ತ ಸಾಲಿನಲ್ಲಿ ನಡೆದ ರಾಜ್ಯ-ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಕ್ರೀಡಾ ವಿದ್ಯಾರ್ಥಿ ವೇತನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾಯಿತವಾದ ಕ್ರೀಡಾ ಸಂಸ್ಥೆಗಳು 2017ರ ಜನವರಿ 1 ರಿಂದ 2017ರ ಡಿಸೆಂಬರ್ 31 ರವರೆಗೆ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು. ಅಥವಾ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ಕ್ರೀಡಾ ಪ್ರಾಧಿಕಾರ, ಸ್ಕೂಲ್ ಗೇಮ್ಸ್ ಫೆಡರೇಷನ್ ಹಾಗೂ ಅಂಗೀಕೃತ ಕ್ರೀಡಾ ಫೆಡರೇಷನ್ ವತಿಯಿಂದ 2017ನೇ ಸಾಲಿನಲ್ಲಿ ಏರ್ಪಡಿಸಿರುವ ರಾಜ್ಯ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ಅಥವಾ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅರ್ಹ ಕ್ರೀಡಾಪಟುಗಳಿಗೆ ಮಾತ್ರ ಕ್ರೀಡಾ ವಿದ್ಯಾರ್ಥಿ ವೇತನ ನೀಡಲಾಗುವದು. ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು 2018ರ ಜನವರಿ 8 ಕೊನೆಯ ದಿನವಾಗಿದೆ. ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ನಮೂನೆಗೆ ದೂರವಾಣಿ ಸಂಖ್ಯೆ: 08272-228985 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ತಿಳಿಸಿದ್ದಾರೆ.