ಗೊಬ್ಬರದ ಸಮರ್ಪಕ ಬಳಕೆಯ ವಿಧಾನ ಕಂಡುಕೊಳ್ಳುವ ಸಲುವಾಗಿ ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವದು ಉತ್ತಮ ಎಂದು ಕಾಫಿ ಮಂಡಳಿ ಉಪ ನಿರ್ದೇಶಕ (ನಿವೃತ್ತ) ಡಾ. ರಾಮಮೂರ್ತಿ ಅಭಿಪ್ರಾಯಪಟ್ಟರು.

ಇಲ್ಲಿನ ಕೃಷಿ ವಿಜಾÐನ ಕೇಂದ್ರದಲ್ಲಿ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ತೋಟ ಹಾಗೂ ಗದ್ದೆಗಳ ಮಣ್ಣಿನ ರಸಸಾರ ಪರೀಕ್ಷೆ ಮಾಡಿಸಿ ನಂತರ ಬೆಳೆಗಳಿಗೆ ನೀಡುವ ಗೊಬ್ಬರದ ಪ್ರಮಾಣವನ್ನು ನಿರ್ಧರಿಸಬೇಕು ಎಂದು ಸಲಹೆ ನೀಡಿದರು.

ಗೊಬ್ಬರ ಬಳಕೆಯ ಮಿತಿಯನ್ನು ರೈತರು ಸ್ವಯಂಪ್ರೇರಿತವಾಗಿ ನಿರ್ಧರಿಸಿ ಬೆಳೆಗಳಿಗೆ ಬೇಕಾಗುವ ಸಮಯದಲ್ಲಿ ಸರಿಯಾಗಿ ನೀಡಲು ಸಾಧ್ಯವಾಗುತ್ತಿಲ್ಲ. ಆಮ್ಲೀಯತೆ ಹೆಚ್ಚಾಗಿದ್ದರೆ ಎಷ್ಟೇ ಪ್ರಮಾಣದ ಗೊಬ್ಬರ ನೀಡಿದರೂ ಪ್ರಯೋಜವಾಗುವದಿಲ್ಲ. ಕ್ಷಾರಯುಕ್ತ ಹಾಗೂ ಆಮ್ಲೀಯ ಮಣ್ಣಿನ ಬಗ್ಗೆ ರೈತರು ತಿಳುವಳಿಕೆ ಪಡೆಯುವ ಅವಶ್ಯಕತೆಯಿದೆ. ಕಾಫಿ ಬೆಳೆಗಾರರು ಗೊಬ್ಬರ ಪೊರೈಕೆಯ ಬಗ್ಗೆ ತಜ್ಞರ ಸಲಹೆ ಪಡೆಯಬೇಕು ಎಂದು ಹೇಳಿದರು. ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನೈಸಗಿಕ ಕೃಷಿಕ ಡಾ. ನರಸಿಂಹನ್ ಮಾತನಾಡಿ, ಆಧುನಿಕ ಜೀವನ ಶೈಲಿಗೆ ಮಾರುಹೋಗಿ ಯುವಜನತೆ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ರೈತರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಕೆಲವು ಯೋಜನೆಗಳು ರೈತರನ್ನು ಕೃಷಿಯಿಂದ ದೂರ ಸರಿಯುವಂತೆ ಮಾಡಿದೆ. ರೈತನ ಸ್ವಾವಲಂಬಿ ಬದುಕಿಗೆ ಸರ್ಕಾರದ ನೀತಿಗಳು ಮಾರಕವಾಗಿದೆ ಎಂದು ಹೇಳಿದರು.

ನೈಸರ್ಗಿಕ ಕೃಷಿಯಲ್ಲಿ ನಾಟಿ ಹಸುಗಳ ಬಳಕೆಯಿಂದ ಉತ್ತಮ ಇಳವರಿ ಪಡೆಯಲು ಸಾಧ್ಯವಿದೆ. ಗೋವುಗಳಲ್ಲಿನ ಹಾಲಿನ ಉತ್ಪತ್ತಿಯನ್ನು ಹೆಚ್ಚು ಮಾಡುವ ದಿಕ್ಕಿನಲ್ಲಿ ವಿಶ್ವದಾದ್ಯಂತ ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸಿ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಆದರೆ ಗೋಮೂತ್ರದಿಂದ ಕೃಷಿಗೆ ಆಗುವ ಉಪಯೋಗಗಳ ಕುರಿತು ಸಂಶೋಧನೆ ನಡೆಸಲು ವಿಜ್ಞಾನಿಗಳು ಆಸಕ್ತಿ ತೋರಿಸುತ್ತಿಲ್ಲ ಎಂದರು. ಮೈಸೂರಿನ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಕುರುಬೂರು ಶಾಂತಕುಮಾರ್ ಮಾತನಾಡಿ, ಸಂಸ್ಥೆಯ ಸದಸ್ಯರ ಗದ್ದೆಗಳಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಗೊಬ್ಬರದ ಪ್ರಮಾಣವನ್ನು ಸೂಚಿಸಿದ ನಂತರ ಉತ್ಪಾದನೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳಿದರು. ಈ ಸಂದರ್ಭ ನಬಾರ್ಡ್ ಅಧಿಕಾರಿ ಎಂ.ಸಿ. ನಾಣಯ್ಯ ರೈತರಿಗೆ ಮಣ್ಣು ಪರೀಕ್ಷಾ ಧೃಡೀಕರಣ ಪತ್ರಗಳನ್ನು ವಿತರಿಸಿದರು. ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಸಾಜು ಜಾರ್ಜ್, ಕಾಫಿ ಬೋರ್ಡ್ ಅಧಿಕಾರಿ ಶಿವಪ್ರಸಾದ್, ಸಸ್ಯ ನಿರ್ವಹಣೆ ತಜ್ಞ ವೀರೇಂದ್ರ ಕುಮಾರ್, ಇಕೋನೆಟ್ ರೈತ ಉತ್ಪಾದಕ ಸಂಸ್ಥೆಯ ಭರತ್ ಕುಮಾರ್ ಇದ್ದರು.