ಕೂಡಿಗೆ, ಡಿ. 7: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ, ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಹಾಗೂ ಬಹುದಿನಗಳ ಬೇಡಿಕೆಯಾಗಿದ್ದ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಪ್ರಾರಂಭಗೊಂಡು ಎರಡುವರೆ ವರ್ಷ ಕಳೆದು, ಶೇ. 50 ರಷ್ಟು ಕಾಮಗಾರಿ ನಡೆದು ಹಣ ಬಿಡುಗಡೆಯಾಗಿಲ್ಲ ಎಂಬ ನೆಪದಲ್ಲಿ ಒಂದುವರೆ ವರ್ಷ ದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಮತ್ತೆ ಚಾಲನೆ ಗೊಂಡಿದೆ.
ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ದೆಹಲಿಯ ಸಿನ್ಹೋ ಕೋಡ್ ಕಂಪೆನಿಯವರು ಟೆಂಡರ್ ಪಡೆದಿದ್ದು, ಟೆಂಡರ್ ಪಡೆದ ಸಂದರ್ಭ ಸರಕಾರದ ವತಿಯಿಂದ ಅಂದಾಜು ರೂ. 4.5 ಕೋಟಿ ಬಿಡುಗಡೆಯಾಗಿದೆ.
ಇದೀಗ ಟರ್ಫ್ ಆವರಣದಲ್ಲಿ ಅಳವಡಿಸಿದ ಕಬ್ಬಿಣದ ಸಲಾಕೆಗಳು, ಇದರ ಜತೆಯಲ್ಲಿ ಹಾಕಿ ಟರ್ಫ್‍ಗೆ ಅಳವಡಿಸಲು ತಂದಿರುವ ಕೃತಕ ಹುಲ್ಲಿನ ದೊಡ್ಡಮಟ್ಟದ ಟರ್ಫ್ ಸೀಟುಗಳು ದಾಸ್ತಾನಿವೆ.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಈ ಶಾಲಾ ಆವರಣಕ್ಕೆ ಇದೀಗ ಹಾಕಿ ಟರ್ಫ್ (ಕೃತಕ ಹುಲ್ಲಿನ ಮೈದಾನ) ದೊರೆತಿದ್ದು, ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹಾಕಿ ಟರ್ಫ್‍ನ ಅವಶ್ಯಕತೆ ಬಹು ಮುಖ್ಯವಾಗಿತ್ತು. ಬಹುದಿನಗಳ ಬೇಡಿಕೆ ಈಡೇರುವಂತಾಗಿದೆ. ಇದೀಗ ಈ ಮೈದಾನ ನಿರ್ಮಾಣಕ್ಕೆ ಇಲಾಖೆಯ ವತಿಯಿಂದ ಸ್ಥಳ ಹಾಗೂ ವ್ಯವಸ್ಥಿತ ಕಾಮಗಾರಿಯು ನಡೆಯಲು ಅನುಕೂಲ ಮಾಡಿಕೊಡಲಾಗುತ್ತಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂಬುದು ಕ್ರೀಡಾಪಟುಗಳ ಬೇಡಿಕೆ.