ಮಡಿಕೇರಿ, ಡಿ. 6: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ವನ್ಯ ಮೃಗಗಳ ಧಾಳಿಗೆ ಬಡ ಜೀವಗಳು ಬಲಿಯಾಗುತ್ತಿದ್ದು ಇದೀಗ ಸರಕಾರ ಮತ್ತೊಂದು ಬಲಿಯನ್ನು ಪಡೆದುಕೊಂಡಿದೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ಸಮೀಪದ ಕೋವರ್ಕೊಲ್ಲಿಯ ನಾಗರೂರು ಕಾಫಿ ತೋಟದಲ್ಲಿ ವಾಚ್‍ಮ್ಯಾನ್ ಆಗಿದ್ದ ತಿಮ್ಮಪ್ಪ ಎಂಬುವವರನ್ನು ರಾತ್ರಿ ವೇಳೆ ಚಿರತೆಯೊಂದು ಭೀಕರವಾಗಿ ದಾಳಿ ಮಾಡಿ ಕೊಂದುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕೇತ್ ಪೂವಯ್ಯ ತಮ್ಮ ವಿಷಾದವನ್ನು ವ್ಯಕ್ತಪಡಿಸಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ವರುಷಗಳಿಂದ ಕೊಡಗಿನಲ್ಲಿ ವನ್ಯಮೃಗಗಳ ಧಾಳಿಗೆ ತುತ್ತಾದವರಲ್ಲಿ ಬಹುತೇಕರು ಕೂಲಿ ಕಾರ್ಮಿಕರು ಹಾಗೂ ಶ್ರಮಜೀವಿಗಳೇ ಇದ್ದು 33 ಜನಕಾರ್ಮಿಕರು ಆನೆ ದಾಳಿಗೆ ಸಾವಿಗೀಡಾಗಿದ್ದಾರೆ. ಹಲವಾರು ಬಾರಿ ಅರಣ್ಯ ಸಚಿವರನ್ನು ಬೇಟಿ ಮಾಡಿ ಸಮಸ್ಯೆಯನ್ನು ತಿಳಿಸಿದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ಇರುವದು ದೊಡ್ಡ ದುರಂತÀವಾಗಿದೆ ಎಂದರು.

ಇತ್ತೀಚೆಗಷ್ಟೇ ದಕ್ಷಿಣ ಕೊಡಗಿನಲ್ಲಿ ಬೊಳ್ಳು ಎಂಬುವವರ ಮೇಲೆ ಹುಲಿಯೊಂದು ಧಾಳಿ ಮಾಡಿ ಗಂಭಿರವಾಗಿ ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ, ಸಿದ್ದಾಪುರ ಮಾಲ್ದಾರೆ ತಿತಿಮತಿ ವ್ಯಾಪ್ತಿಗಳಲ್ಲಿ ಹುಲಿ ನಿರಂತರವಾಗಿ ಜಾನುವಾರಗಳ ಮೇಲೆ ಧಾಳಿ ಮಾಡುತ್ತಲೇ ಬಂದಿದೆ. ಪ್ರತಿ ಬಾರಿ ಇಂತಹ ಘಟನೆಗಳು ನಡೆದಾಗ ಜೆಡಿಎಸ್ ನಿರಂತರವಾಗಿ ಹೋರಾಡುತ್ತ ಬಂದಿದೆ ಆದರೂ ಅರಣ್ಯ ಸಚಿವರಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಕೊಡಗಿನ ಬಗ್ಗೆ ಕಿಂಚಿತ್ತೂ ಕನಿಕರವನ್ನು ತೋರದಿರುವದು ಎಷ್ಟು ಶೋಚನೀಯ ಅಂದರೆ ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೆ ಇದ್ದವೆಯೇ ಎಂಬ ಸಂಶಯ ಪ್ರತಿಯೊಬ್ಬ ನಾಗರಿಕರಿಗೂ ಕಾಡತೊಡಗಿದೆ.

ವನ್ಯ ಮೃಗಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದುವರಿದ ತಂತ್ರಜ್ಞಾವನ್ನು ಬಳಸಬೇಕಿದೆ. ಕೇವಲ ಬೋನು ಇಟ್ಟು ಹುಲಿ ಚಿರತೆ ಹಿಡಿಯುತ್ತೇವೆ ಎಂದರೆ ಅದು ಅರಣ್ಯ ಇಲಾಖೆಯ ಮೂರ್ಖತನವನ್ನು ಎತ್ತಿಹಿಡಿಯುತ್ತದೆ. ವೈಜ್ಞಾನಿಕವಾಗಿ ವನ್ಯ ಪ್ರಾಣಿಗಳನ್ನು ಹಿಡಿಯಲು ಇಲಾಖೆ ಹಾಗು ಸರಕಾರಗಳು ಯೋಜನೆಗಳನ್ನು ರೂಪಿಸಬೇಕಿದೆ ಆನೆ ಮಾನವ ಸಂಘರ್ಷವನ್ನು ತಡೆಯಲು ಕಂದಕಗಳ ನಿರ್ಮಾಣ ಆಗಬೇಕಿದೆ, ಅವೈಜ್ಞ್ಞಾನಿಕವಾಗಿ ನಿರ್ಮಿಸಿರುವ ಕಂದಕಗಳು ಕೇವಲ ತೋರ್ಪಡಿಕೆಗಷ್ಟೇ ವಿನಃ ಅದರಿಂದ ಯಾವದೇ ಪ್ರಯೋಜನ ಇಲ್ಲ ಎಂದು ಅವರು ದೂರಿದ್ದಾರೆ.

ಜಿಲ್ಲೆಯಲ್ಲಿ ಕಾಡಾನೆ ಧಾಳಿಯಿಂದ ಕೂಡ ಕಾರ್ಮಿಕ ಹಾಗು ಬೆಳೆಗಾರರು ರೈತರು ಕಂಗಾಲಾಗಿದ್ದು ಸೂಕ್ತ ಪರಿಹಾರ ಒದಗಿಸುವಲ್ಲಿ ಸ್ಥಳಿಯ ಶಾಸಕರು ಮತ್ತು ಸಂಸದರು ವಿಫಲರಾಗಿದ್ದು ತಕ್ಷಣ ಮೃತ ತಿಮ್ಮಪ್ಪನವರ ಕುಟುಂಬಕ್ಕೆ ಸರಕಾರದಿಂದ ಹೆಚ್ಚಿನ ಪರಿಹಾರವನ್ನು ಕೊಡಿಸಲಿ ಎಂದು ಒತ್ತಾಯಿಸಿದ್ದಾರೆ.