ಮಡಿಕೇರಿ, ಡಿ.6 : ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನ ಮಠ ತಿಳಿಸಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಮಂಗಳೂರು ಮತ್ತು ಕಾರವಾರದಲ್ಲಿ ಈ ಪ್ರಕ್ರಿಯೆ ನಡೆದಿದ್ದು, ಜನಸಂಖ್ಯೆಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರೆಯಬೇಕು ಎಂಬದು ಆಶಯವಾಗಿದೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೆ 10,268 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮೂರು ತಾಲೂಕಿನಲ್ಲಿ ತಲಾ 8 ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಸಕ್ತ ವರ್ಷದಲ್ಲಿ ಇನ್ನೂ 2500 ಶುದ್ಧ ಕುಡಿಯುವ ನೀರು ಘಟಕ ನಿರ್ಮಿಸಲು ಮುಂದಾಗಿದೆ ಎಂದು ನುಡಿದರು.
ರಾಜ್ಯದ 16 ಜಿಲ್ಲೆಗಳು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದ್ದು, ಉಳಿದ 14 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆ ಎಂದು ಹೇಳಿದರು.
ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಇನ್ನೂ ಶೋಚನೀಯ ಪರಿಸ್ಥಿತಿ ಇದ್ದು, ವೈಯಕ್ತಿಕ ಮತ್ತು ಸಮುದಾಯ ಶೌಚಾಲಯ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಮಿತಿ ಸದಸ್ಯ ಮಿಡಿಕೇಶಿ ರಾಜು ಮಾತನಾಡಿ, ಮಾಹಿತಿ ಶಿಕ್ಷಣ ಮತ್ತು ಸಹಭಾಗಿತ್ವ (ಐಇಸಿ) ಕಾರ್ಯ ಕ್ರಮದಡಿ ಹೆಚ್ಚಿನ ಅನುದಾನವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ಮಾಡಿದರು.
ಘನ ತ್ಯಾಜ್ಯ ವಿಲೇವಾರಿ, ಶೌಚಾಲಯ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.
ಮತ್ತೊಬ್ಬ ಸದಸ್ಯ ತಿಪ್ಪೆಸ್ವಾಮಿ ಮಾತನಾಡಿ, ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಆ ದಿಸೆಯಲ್ಲಿ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ ನಿರ್ಮಾಣ, ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮತ್ತಿತರ ಬಗ್ಗೆ ಗಮನಹರಿಸಬೇಕಿದೆ ಎಂದರು.
ಜಿ.ಪಂ. ಉಪ ಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಜಿ.ಪಂ. ಎಂಜಿನಿಯರ್ ರಾಜ್‍ಕುಮಾರ್ ರೆಡ್ಡಿ, ತಾ.ಪಂ. ಇಒಗಳು, ಸ್ವಚ್ಛತಾ ಆಂದೋಲನದ ಸಮಾಲೋಚಕರು ಇತರರು ಇದ್ದರು.