ವೀರಾಜಪೇಟೆ, ಡಿ. 6: ಸಂಸದ ಪ್ರತಾಪ್ ಸಿಂಹ ಅವರ ಬಂಧನಕ್ಕೆ ಕಾರಣಕರ್ತರಾದ ಮೈಸೂರು ಎಸ್.ಪಿ. ರವಿ ಚೆನ್ನಣ್ಣನವರ್ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು ಹಾಗೂ ಅವರನ್ನು ತಕ್ಷಣ ಅಮಾನತುಪಡಿಸಬೇಕು. ಅಲ್ಲದೆ ಕಾಂಗ್ರೆಸ್ ಏಜೆಂಟ್‍ರಂತೆ ಹೇಳಿಕೆ ನೀಡಿರುವದು ನಾಚಿಕೆಗೇಡು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ತಾಲೂಕು ಬಿಜೆಪಿ ಘಟಕದ ವತಿಯಿಂದ ಸಂಸದ ಪ್ರತಾಪ್ ಸಿಂಹ ಹುಣಸೂರಿನ ಹನುಮ ಜಯಂತಿಗೆ ತೆರಳುತ್ತಿದ್ದ ವೇಳೆ ತಡೆದು ಕಾನೂನು ಬಾಹಿರವಾಗಿ ಬಂಧಿಸಿದ ಮೈಸೂರು ಪೊಲೀಸರು ಹಾಗೂ ಸರಕಾರದ ನಡೆಯನ್ನು ಖಂಡಿಸಿ ಪಟ್ಟಣದ ಗಡಿಯಾರ ಕಂಬದ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಹುಣಸೂರಿನಲ್ಲಿ ನಡೆದ ಘಟನೆಯನ್ನು ಹಿಂದೂ ಸಮಾಜ ಸಹಿಸುವದಿಲ್ಲ. ಅದು ಪ್ರಜಾಪ್ರಭುತ್ವದ ವಿರೋಧಿ ನೀತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಜನರ ಭಾವನೆಯನ್ನು ಗೌರವಿಸಬೇಕು. ಒಂದು ವರ್ಗದ ಓಲೈಕೆ ಸರಿಯಲ್ಲ ಎಂದು ಹೇಳಿದರು.