ಕೂಡಿಗೆ, ಡಿ. 6: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಪ್ಪನಗುಡಿ ಗ್ರಾಮದ ಸಮೀಪ ಬಾಣಾವರ ಕಡೆಯಿಂದ ಹೆಬ್ಬಾಲೆ ಕಡೆಗೆ ವೇಗವಾಗಿ ಬರುತ್ತಿದ್ದ ಆಟೋ (ಕೆ.ಎ.13.112) ಚಾಲಕನ ಹತೋಟಿಗೆ ಸಿಗದೆ ಮಗುಚಿ ರಸ್ತೆಗುರುಳಿದ ಪರಿಣಾಮ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ಹಾಸನ ಜಿಲ್ಲೆಯ ಮರಿನಗರ ಗ್ರಾಮದ ನಿವಾಸಿ ಅಂತೋಣಿ ಕುಮಾರ್ ಎಂದು ತಿಳಿದು ಬಂದಿದೆ. ಚಾಲಕನಿಗೆ ತಲೆಗೆ ತೀವ್ರವಾದ ಗಾಯಗಳಾದ ಪರಿಣಾಮ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಆಟೋ ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.