ಮಡಿಕೇರಿ, ಡಿ.6 : ವೀರಾಜಪೇಟೆಯ ಪೆರುಂಬಾಡಿ ಶಂಸುಲ್ ಉಲಮಾ ವಿದ್ಯಾಸಂಸ್ಥೆಯ ಮಹಿಳಾ ಪದವಿ ಪೂರ್ವ ಕಾಲೇಜಿನ 5ನೇ ವಾರ್ಷಿಕೋತ್ಸವ ಸಮಾರಂಭ ತಾ.9 ರಂದು ನಡೆಯಲಿದೆ ಎಂದು ಶಂಸುಲ್ ಉಲಮಾ ಟ್ರಸ್ಟ್‍ನ ಸ್ವಾಗತ ಸಮಿತಿಯ ಸಂಚಾಲಕ ಎಂ. ತಮ್ಲಿಕ್ ದಾರಿಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಲಾಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ವ್ಯವಸ್ಥಾಪಕ ಸಿ.ಪಿ.ಎಂ. ಬಶೀರ್ ಹಾಜಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಶಂಸುಲ್ ಉಲಮಾ ವಿದ್ಯಾಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಅನಾಥ ಹಾಗೂ ನಿರ್ಗತಿಕರ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಉತ್ತಮ ಫಲಿತಾಂಶದೊಂದಿಗೆ ಮುಂದೆ ಸಾಗುತ್ತಿದೆ.

2015ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಂಗೀಕೃತದೊಂದಿಗೆ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡು ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ತರಗತಿಗಳು ನಡೆಯುತ್ತಿವೆ. ಎಲ್ಲಾ ವಿಭಾಗದಲ್ಲೂ ವಿದ್ಯಾರ್ಥಿನಿಯರು ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡು ಶೇ.100 ರಷ್ಟು ಫಲಿತಾಂಶ ಗಳಿಸಿ ಗಣನೀಯ ಸಾಧನೆ ಮಾಡಿದ್ದಾರೆ. ಇದೀಗ ಸಂಸ್ಥೆಯ ವತಿಯಿಂದ ಎಲ್.ಕೆ.ಜಿ ಮತ್ತು 1ನೇ ತರಗತಿಯನ್ನು ಆರಂಭಿಸಲಾಗಿದ್ದು, 263 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಐದನೇ ವಾರ್ಷಿಕೋತ್ಸವ ಸಮಾರಂಭವನ್ನು ಕೆಪಿಸಿಸಿ ಕಾರ್ಯದರ್ಶಿ ಕೆ.ಎಂ.ಇಬ್ರಾಹಿಂ ಮಾಸ್ಟರ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಶಿಕ್ಷಣ ಸಚಿವ ತನ್ವೀರ್ ಶೇಠ್, ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಎಂ. ತಮ್ಲಿಕ್ ದಾರಿಮಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಉಪಾಧ್ಯಕ್ಷÀ ಎಚ್.ಎಂ.ಮಹಮ್ಮದ್ ಹಾಜಿ, ಸದಸ್ಯರಾದ ಬಿ.ಹೆಚ್.ಅಹಮ್ಮದ್ ಹಾಜಿ, ವೈ.ಎಮ್.ಉಮ್ಮರ್ ಪೈಜಿó, ಅಬ್ದುಲ್ ರೆಹಮಾನ್ ಹಾಜಿ, ಪೋಷಕ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷ ಕನ್ನಡಿಯಂಡ ಜನಾಬ್ ಜುಬೈರ್ ಉಪಸ್ಥಿತರಿದ್ದರು.