ಶ್ರ್ರೀಮಂಗಲ, ಡಿ. 6: ಎಲ್ಲಾ ರಾಜಕೀಯ ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡುವದನ್ನು ಹಾಗೂ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವದನ್ನು ನಿಲ್ಲಿಸುವ ಮೂಲಕ ಪೊನ್ನಂಪೇಟೆ ತಾಲ್ಲೂಕು ರಚನೆಗೆ ತಮ್ಮ ತಮ್ಮ ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಬೇಕೆಂದು ಕಾನೂರು ಕೊಡವ ಸಮಾಜದ ಅಧ್ಯಕ್ಷ ಮಚ್ಚಮಾಡ ಕಂದಾ ಭೀಮಯ್ಯ ಹೇಳಿದರು.

ಪೊನ್ನಂಪೇಟೆ ತಾಲೂಕು ಪುರ್ನರಚನೆಗೆ ಒತ್ತಾಯಿಸಿ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.

ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿ ಪೊನ್ನಂಪೇಟೆ ತಾಲೂಕು ರಚನೆಗಾಗಿ ಮಹಾತ್ಮ ಗಾಂಧಿಯವರ ಪ್ರತಿಮೆ ಎದುರು 36 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಸರ್ಕಾರ ತಾಲೂಕು ರಚನೆಗೆ ಮುಂದಾಗದಿದ್ದರೆ ಹೆದ್ದಾರಿ ತಡೆಯಂತಹ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗಬಹುದೆಂದು ಎಚ್ಚರಿಸಿದರು.

ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ ಸರ್ಕಾರ ತಾಲೂಕು ಬೇಡಿಕೆಗೆ ಸ್ಪಂದಿಸದೆ ನಿರ್ಲಕ್ಷ ತಾಳಿದರೆ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗುವ ಮೂಲಕ ಅಹಿತಕರ ಘಟನೆಗೆ ಸರ್ಕಾರವೇ ಆಸ್ಪದ ಮಾಡಿಕೊಟ್ಟಂತಾಗುತದೆಂದು ಎಚ್ಚರಿಸಿದರು. ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಮಾತನಾಡಿ ಸರ್ಕಾರ ಶೀಘ್ರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾಲೂಕು ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ, ಹೋರಾಟಕ್ಕೆ 120 ಸಂಘಟನೆಗೆಳು ಬೆಂಬಲ ನೀಡಿವೆ. ಕೊಡಗಿನ ಇಬ್ಬರು ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು ಸರ್ಕಾರವನ್ನು ಗಟ್ಟಿ ಧ್ವನಿಯಲ್ಲಿ ಗಮನ ಸೆಳೆಯಬೇಕಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ನಾಲ್ಕೇರಿ ಗ್ರಾಮದ ಅಲ್ಲುಮಾಡ ಕುಟುಂಬಸ್ಥರು, ನಾಲ್ಕೇರಿ ಗ್ರಾಮಸ್ಥರು, ನಾಲ್ಕೇರಿಯ ಶ್ರೀ ಕೃಷ್ಣ ಸ್ವಸಹಾಯ ಸಂಘ, ಬಿಕೆಎನ್ ಅಸೋಸಿಯೇಷನ್, ಶ್ರೀ ಮಹಾದೇಶ್ವರ ಅಭಿವೃದ್ಧಿ ಸಮಿತಿ, ಬೆಸಗೂರು ಗ್ರಾಮದ ಶ್ರಿ ಮಹಾದೇವ ಅಭಿವೃದ್ಧಿ ಸಮಿತಿ, ಶ್ರೀ ಮಹಾದೇಶ್ವರ ಸ್ವಸಹಾಯ ಸಂಘ, ಬೆಸಗೂರು ಸ್ವಸಹಾಯ ಸಂಘ, ಶ್ರೀ ಈಶ್ವರ ರೈತ ಸಂಘ, ಶ್ರೀ ಅಯ್ಯಪ್ಪ ಸ್ವಸಹಾಯ ಸಂಘ, ಶ್ರೀ ದುರ್ಗಿ ಸ್ವಸಹಾಯ ಸಂಘ, ಶ್ರೀ ಧನಲಕ್ಷ್ಮಿ ಸ್ವಸಹಾಯ ಸಂಘ, ಶ್ರೀ ಭದ್ರಕಾಶಿ ಸ್ವಸಹಾಯ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬೆಂಬಲ ನೀಡಿದರು.

ಪ್ರಮುಖರಾದ ಗುಡಿಯಂಗಡ ನಾಚಪ್ಪ, ಪುಳ್ಳಂಗಡ ಪವನ್, ಅಲ್ಲುಮಾಡ ಡ್ಯೆಸಿ ತಿಮ್ಮಯ್ಯ, ಚೆಪ್ಪುಡಿರ ಕರಣ್, ಪುಳ್ಳಂಗಡ ನಟೇಶ್, ಚೆಟ್ಟಿಮಾಡ ರಾಬಿನ್, ಅರಮಾಣಮಾಡ ಶರಣು, ನಾಲ್ಕೇರಿ ಗ್ರಾ.ಪಂ ಅಧ್ಯಕ್ಷ ಅಲ್ಲುಮಾಡ ಮುತ್ತಪ್ಪ, ಪೊನ್ನಂಪೇಟೆ ಗ್ರಾ.ಪಂ ಅಧ್ಯಕ್ಷೆ ಮೂಕಳೆÉೀರ ಸುಮಿತಾ ಗಣೇಶ್, ಚೆಪ್ಪುಡಿರ ಸೋಮಯ್ಯ, ಚೆಪ್ಪುಡಿರ ಪೊನ್ನಪ್ಪ, ಮಲ್ಲಮಾಡ ಪ್ರಭು ಪೂಣಚ್ಚ, ಮುಕ್ಕಾಟಿರ ಪ್ರವೀಣ್ ಭೀಮಯ್ಯ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.