ಮಡಿಕೇರಿ, ಡಿ. 6: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಗೋಪಿಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಹೊಸೂರು ಬೆಟ್ಟಗೇರಿ ಶಾಲೆಯಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅದ್ಯಕ್ಷ ಕೆ.ಎಂ. ಗೋಪಿಚಿಣ್ಣಪ್ಪ ಅವರು ಮಹಿಳೆಯರು ಮತ್ತು ಮಕ್ಕಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಸಿ.ಡಿ.ಪಿ.ಓ. ಲೀಲಾವತಿ ಮಾತನಾಡಿ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಎಲ್ಲರೂ ಕೈ ಜೋಡಿಸುವಂತೆ ಕರೆÀ ನೀಡಿದರು. ಸಹಾಯಕ ಅರಕ್ಷಕ ನಿರೀಕ್ಷಕರು ಮಾತನಾಡುತ್ತ ಬಾಲ ಕಾರ್ಮಿಕ ನಿಷೇದ ಬಾಲ್ಯ ವಿವಾಹ ನಿಷೇದ ವರದಕ್ಷಿಣೆ ಕಿರುಕುಳ ಮಹಿಳಾ ದೌರ್ಜನ್ಯಕ್ಕೆ ಸಂಬಂಧಪಟ್ಟ ಕಾನೂನುಗಳನ್ನು ವಿವರಿಸಿ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಪೋಲಿಸ್ ಇಲಾಖೆಗೆ ತಿಳಿಸುವಂತೆ ಹೇಳಿದರು. ಪ್ರಾಥಮಿಕ ಅರೋಗ್ಯದ ಬಗ್ಗೆ ವೈದ್ಯಾಧಿಕಾರಿ ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆ ಹೆಚ್.ಟಿ. ಲಕ್ಷ್ಮಿ, ಜಾನ್ಸಿ, ನೇತ್ರಾವತಿಯವರು ಮಾತೃಪೂರ್ಣ ಯೋಜನೆಯಿಂದ ಆಗುತ್ತಿರುವ ತೊಂದರೆಗಳನ್ನು ವಿವರಿಸಿ ಸರಿಪಡಿಸಲು ಕೋರಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮಾತೃಪೂರ್ಣ ಯೋಜನೆಯ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು, ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಬಾಣಂತಿಯರು ಅಹಾರ ಸ್ವೀಕರಿಸಲು ಅಂಗನವಾಡಿ ಕೇಂದ್ರಗಳಿಗೆ ಬರುವದು ಕಷ್ಟಕರವಾಗಿದೆ. ಈ ಮೊದಲು ಜಾರಿಯಲ್ಲಿದ್ದ ಗರ್ಬಿಣಿ ಬಾಣಂತಿಯರ ಮನೆಗಳಗೆ ಪೌಷ್ಠಿಕ ಆಹಾರ ತಲುಪಿಸುವ ವ್ಯವಸ್ಥೆಯನ್ನು ಮರು ಜಾರಿಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಸರ್ಕಾರದ ಗಮನ ಸೆಳೆಯಲಾಗುವದು ಎಂದು ತಿಳಿಸಿದರು. ನಂತರ ಶಾಲೆಯ ಮಕ್ಕಳ ಅಹವಾಲುಗಳನ್ನು ಆಲಿಸಿ ತೆಗೆದುಕೊಳ್ಳುವ ಕ್ರಮಗಳನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು. ಪಿಡಿಓ ಶ್ರೀನಿವಾಸ್‍ಗೌಡ ವಂದಿಸಿದರು.