ಕುಶಾಲನಗರ, ಡಿ. 6: ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಕುಶಾಲನಗರಕ್ಕೆ ಆಗಮಿಸಿದ ಜನಜಾಗೃತಿ ಯಾತ್ರೆಯ ರಥವನ್ನು ಕುಶಾಲನಗರದಲ್ಲಿ ಸಾಂಪ್ರದಾಯಿಕ ವಾಗಿ ಬರಮಾಡಿಕೊಳ್ಳಲಾಯಿತು.
ಜಾತ್ರಾ ಮಹೋತ್ಸವದ ಮಾಹಿತಿಯನ್ನು ತಿಳಿಸುವ ಅಂಗವಾಗಿ ಮೈಸೂರಿನಿಂದ ಹೊರಟ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಸಮಿತಿಯ ರಥವನ್ನು ಕುಶಾಲನಗರ ಕಾರು ನಿಲ್ದಾಣದಲ್ಲಿ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಸ್ವಾಗತಿಸಿದರು.
2018 ರ ಜನವರಿ 13 ರಿಂದ 18 ರವರೆಗೆ ಸುತ್ತೂರು ಕ್ಷೇತ್ರದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 15 ರಂದು ರಥೋತ್ಸವ ಜರುಗಲಿದೆ ಎಂದು ರಥ ಸಂಚಾಲಕ ಪಂಚಾಕ್ಷರಿ ಮಾಹಿತಿ ನೀಡಿದರು.
ಜಾತ್ರಾ ಮಹೋತ್ಸವ ಸಂದರ್ಭ ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ಚಿತ್ರಸಂತೆ, ಸಾಮೂಹಿಕ ವಿವಾಹ, ಕುಸ್ತಿ ಪಂದ್ಯಾವಳಿ, ಸಾಂಸ್ಕøತಿಕ ಮೇಳ ಹಾಗೂ ದನದ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಮಹೋತ್ಸವದಲ್ಲಿ ತೆಪ್ಪೋತ್ಸವ, ಕೊಂಡೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಭಕ್ತಾದಿಗಳ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ ಸುತ್ತೂರು ಕ್ಷೇತ್ರಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗುವದು ಎಂದು ವಿವರ ಒದಗಿಸಿದರು.
ಕುಶಾಲನಗರಕ್ಕೆ ರಥ ಆಗಮಿಸಿದ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ, ಜಿಲ್ಲಾ ಪಂಚಾಯ್ತಿ ಸದಸ್ಯೆ ಕುಮುದ ಧರ್ಮಪ್ಪ, ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಪಂಚಾಯ್ತಿ ಸದಸ್ಯ ಎಚ್.ಎಂ.ಮಧುಸೂದನ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ.ಮಹದೇವಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಬಿ.ರಾಜು, ಶಿಕ್ಷಕ ಟಿ.ಜಿ.ಪ್ರೇಮ್ಕುಮಾರ್, ನಿವೃತ್ತ ಪ್ರಾಂಶುಪಾಲ ಹೆಚ್.ವಿ.ಶಿವಪ್ಪ, ಜನಜಾಗೃತಿ ಸಮಿತಿಯ ಗುರುಲಿಂಗಪ್ಪ, ಕುಮಾರ್, ಮಹದೇವಸ್ವಾಮಿ ಮತ್ತಿತರರು ಇದ್ದರು.