ಮೂರ್ನಾಡು, ಡಿ. 5: ವಿಶ್ವ ಮಣ್ಣು ಸಂರಕ್ಷಣಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾದ ಸೈಕಲ್ ಜಾಥ ಮೂರ್ನಾಡಿನಿಂದ ನಾಪೋಕ್ಲುವರೆಗೆ ಸಂಚರಿಸಿ ಜನತೆಯಲ್ಲಿ ಪರಿಸರ ಕುರಿತು ಅರಿವು ಮೂಡಿಸಿದರು.

ಕ್ಲೀನ್ ಕೊಡಗು ಸಂಘಟನೆ ವತಿಯಿಂದ ಆಯೋಜಿಸಲಾದ ಜಾಥವನ್ನು ಮೂರ್ನಾಡು ಮಾರುತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಚೇಂದ್ರಿಮಾಡ ದೇವಯ್ಯ ಉದ್ಘಾಟಿಸಿ ಚಾಲನೆ ನೀಡಿದರು. ಪಟ್ಟಣದ ಚರ್ಚ್ ಬಳಿಯಿಂದ ಆರಂಭಗೊಂಡ ಜಾಥವು ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಚರಿಸಿ ಜನತೆಗೆ ಪರಿಸರ ಕುರಿತು ಅರಿವು ಮೂಡಿಸಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ ಮಾತನಾಡಿ ನಮ್ಮ ಪರಿಸರವನ್ನು ಸ್ವಚ್ಛವಾಗಿಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ಹಾಳು ಮಾಡುವದರಿಂದ ಮುಂದಿನ ಪೀಳಿಗೆಗೆ ದುಷ್ಪರಿಣಾಮಗಳು ಬೀರುವದು ಖಂಡಿತ. ಪರಿಸರ ರಕ್ಷಣೆಯ ಕುರಿತು ಪ್ರತಿಯೊಬ್ಬರು ಅರಿವು ಮೂಡಿಸಿ ಕೊಂಡು ಉಳಿಸಬೇಕಾಗಿದೆ ಎಂದರು.

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣು ಗೋಪಾಲ್ ಮಾತನಾಡಿ ಜಾಥ ನಡೆಸಿ ಜನರಲ್ಲಿ ಅರಿವು ಮೂಡಿಸುತ್ತಿರುವದು ಸಂತೋಷಕರ ವಿಚಾರ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಕರೆನೀಡಿದರು. ಕ್ಲೀನ್ ಕೊಡಗು ಸಂಘಟನೆಯ ಸಂಚಾಲಕ ಬಡುವಂಡ ಅರುಣ್ ಅಪ್ಪಚ್ಚು ಪರಿಸರ ರಕ್ಷಣೆ ಕುರಿತು ಘೋಷಣೆಗಳನ್ನು ಕೂಗಿದರು. ಜಾಥದಲ್ಲಿ ಕ್ಲೀನ್ ಕೊಡಗು ಸಂಘಟನೆ, ಮೂರ್ನಾಡು ಮಾರುತಿ ಶಾಲೆ, ನಾಪೋಕ್ಲು ಅಂಕುರ್ ಶಾಲೆ, ನಾಪೋಕ್ಲು ಲಯನ್ಸ್ ಕ್ಲಬ್‍ನ 35 ಮಂದಿ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.