ಮಡಿಕೇರಿ, ಡಿ. 4: ಮಡಿಕೇರಿ ತಾಲೂಕಿನ ಮರಗೋಡು ಗ್ರಾ.ಪಂ. ಕಟ್ಟೆಮಾಡು ಪರಂಬು ಪೈಸಾರಿಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ಕೆ. ಭವಾನಿ ಎಂಬವರ ವಿರುದ್ಧ ಕೆಲವರು ವಿನಾಕಾರಣ ಆರೋಪ ಹೊರಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ಪತ್ರಿಕಾ ಹೇಳಿಕೆ ನೀಡಿರುವ ಸಂಘದ ತಾಲೂಕು ಅಧ್ಯಕ್ಷೆ ವಿ.ಹೆಚ್. ನಾಗರತ್ನ, ಕಟ್ಟೆಮಾಡು ಗ್ರಾಮದ ಕೆಲವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಭವಾನಿ ವಿರುದ್ಧ ದೂರು ನೀಡಿದ್ದರು. ಆದರೆ ವಿಚಾರಣೆಯ ಸಂದರ್ಭ ಈ ಆರೋಪ ಸಾಬೀತಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವದೇ ಸಮಸ್ಯೆಗಳು ಉದ್ಭವವಾದಾಗ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳುವ ಔದಾರ್ಯ ತೋರಬೇಕೆ ಹೊರತು ಉದ್ದೇಶಪೂರ್ವಕವಾಗಿ ಸಮಸ್ಯೆಯನ್ನು ಜಟಿಲಗೊಳಿಸಿ ವಿನಾಕಾರಣ ಆರೋಪ ಮಾಡುವದನ್ನು ಖಂಡಿಸುವದಾಗಿ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ನಾಗರತ್ನ ಸುಳ್ಳು ಆರೋಪ ಮತ್ತು ಕಿರುಕುಳ ಮುಂದುವರೆದರೆ ಸಂಘದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಿಳಾ ಆಯೋಗಕ್ಕೂ ದೂರು ನೀಡುವದಾಗಿ ಅವರು ತಿಳಿಸಿದ್ದಾರೆ.