ಕುಶಾಲನಗರ, ಡಿ. 5: ಹುತ್ತರಿ ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ 74ನೇ ಮಹಾ ಆರತಿ ಬೆಳಗಲಾಯಿತು. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿಯ ಕಾವೇರಿ ಆರತಿ ಕ್ಷೇತ್ರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅಷ್ಟೋತ್ತರ ಪೂಜಾ ವಿಧಿಗಳನ್ನು ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಕೃಷ್ಣಮೂರ್ತಿ ಭಟ್, ನದಿ ನೀರನ್ನು ಕಲುಷಿತಗೊಳಿಸದೆ ಸ್ವಚ್ಛವಾಗಿ ಹರಿಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಜೀವನದಿಯನ್ನು ಪ್ರತಿಯೊಬ್ಬರೂ ತಾಯಿಯಂತೆ ಪೂಜಿಸಬೇಕು. ಈ ಮೂಲಕ ಸ್ವಚ್ಛ ಕಾವೇರಿ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಕಾವೇರಿ ನದಿ ಜಾಗೃತಿ ಸಮಿತಿ ಸಂಚಾಲಕ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದ, ಲೀಲಾ, ಬಿ.ಜೆ. ಅಣ್ಣಯ್ಯ, ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ವೈಶಾಖ್, ಪ್ರವೀಣ್, ಕೃಷ್ಣ ಮತ್ತಿತರರು ಇದ್ದರು. ಇದೇ ಸಂದರ್ಭ ಕುಶಾಲನಗರ ಕೊಪ್ಪ ಸೇತುವೆ ಬಳಿ ಕಾವೇರಿ ಮಾತೆಯ ಪ್ರತಿಮೆಗೆ ಅಭಿಷೇಕ ಮತ್ತು ಆರತಿ ಕಾರ್ಯಕ್ರಮ ಜರುಗಿತು. ಬಾರವಿ ಸಂಸ್ಥೆಯ ರವೀಂದ್ರ ಪ್ರಸಾದ್, ಬಬೀಂದ್ರ ಪ್ರಸಾದ್ ಸಹೋದರರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಭಕ್ತಾದಿಗಳು ಪಾಲ್ಗೊಂಡಿದ್ದರು.