ಗೋಣಿಕೊಪ್ಪ ವರದಿ, ಡಿ. 5: ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್ನಲ್ಲಿ ಬೊಟ್ಟಿಯತ್ ನಾಡು, ಬೇರಳಿ ನಾಡು ಹಾಗೂ ಕುತ್ತ್ನಾಡು ಈ ಮೂರು ನಾಡಿನ ಆಶ್ರಯದಲ್ಲಿ ನಡೆಯಿತು.
ಬೆಳಿಗ್ಗೆ 9.30 ಗಂಟೆಗೆ ಮೂರು ನಾಡಿನವರು ಮಂದ್ ಹಿಡಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಸಾಮೂಹಿಕ ಕೊಲಾಟ, ಉಮ್ಮತಾಟ್, ಬೊಳಕಾಟ್, ಕಪ್ಪೆಯಾಟ್ ಪರೆಯಕಳಿ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂದ್ನಲ್ಲಿ ಎಲ್ಲಾ ಮೂಲ ನಿವಾಸಿಗಳು ಒಂದಾಗಬೇಕಿದೆ. ಹಾಗೇ ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಉಡುಪಿನ ಮಹತ್ವ ಅರಿಯಬೇಕೆಂದರು.
ಇನ್ನೋರ್ವ ಅತಿಥಿ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಮಾತನಾಡಿ ಪದ್ದತಿ ಪರಂಪರೆ ಜನಾಂಗದ ಮೇಲೆ ಅಭಿಮಾನ ಇರಬೇಕು ಹಾಗಾದರೆ ಮಾತ್ರ ನಾವು ಈ ಕೊಡಗಿನಲ್ಲಿ ಹುಟ್ಟಿರುವದಕ್ಕೆ ಹೆಮ್ಮೆ. ಕೊಡಗಿನ ಹಬ್ಬ ಹಲವಾರು ವಿಭಿನ್ನತೆಯನ್ನು ಹೊಂದಿದೆ ಇದನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಕೊಡಗು ಫ್ರೆಸ್ ಕ್ಲಬ್ ಹಾಗೂ ಪತ್ರಕರ್ತ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮ ಹಲವಾರು ಊರು ನಾಡು ಹಾಗೂ ಹಬ್ಬದ ಹೆಸರುಗಳು ಬದಲಾಗಿದೆ, ಸಂಸ್ಥೆಯ ಹಾಗೂ ನಾಡಿನ ಹೆಸರನ್ನು ಕನ್ನಡೀಕರಣ ಮಾಡುವದು ಬೇಡ.
ನಮ್ಮ ಅರಣ್ಯವನ್ನು ಉಳಿಸಬೇಕಿದೆ. ನಮ್ಮ ಊರಿನಲ್ಲಿ ನಮ್ಮ ಭಾಷೆಯನ್ನು ಮಾತನಾಡಲು ಹೆದರಿಕೆ ಹಾಗೂ ಹಿಂಜರಿಕೆ ಬೇಡ. ಕೊಡವರು ಪ್ರಕೃತಿಯನ್ನು ಪೂಜೆ ಮಾಡುವ ಜನಾಂಗ ಎಂದರು.
ಮುಖ್ಯ ಅತಿಥಿಯಾದ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಇದು ನನ್ನ ಹುಟ್ಟೂರಾಗಿದ್ದು, ರಾಜ್ಯದ ಎಲ್ಲಿ ಬೇಕಾದರು ನಾವು ಪದವಿಗಳನ್ನು ಸನ್ಮಾನಗಳನ್ನು ಪಡೆದುಕೊಳ್ಳಬಹುದು ಆದರೆ ನನ್ನ ಹುಟ್ಟೂರಿನಲ್ಲಿ ಸಿಗುವ ಸನ್ಮಾನ ತುಂಬಾ ಸಂತೋಷ ಎನಿಸುತದೆ. ಮಂದ್ಗಳಲ್ಲಿ ಈ ಹಿಂದೆ ಹುಡುಗ ಹುಡುಗಿ ನೋಡುವ ಕಾರ್ಯಕ್ರಮ ನಡೆಯುತಿತ್ತು ಎಂದರು. ಮುಂದುವರಿದ ಅವರು ಸರಕಾರದಿಂದ ಅನುದಾನ ಬರುವಂತಾಗಬೇಕು ಎನ್ನುತ್ತಾ ವೈಯುಕ್ತಿಕವಾಗಿ ಒಂದು ಲಕ್ಷ ಹಣ ನೀಡುವ ಭರವಸೆ ನೀಡಿದರು.
ಮುಂದುವರಿದ ಅವರು ವಿಯಟ್ನಾಮ್ ಕರಿಮೆಣಸು ಸೇರಿದಂತೆ ವಿವಿಧ ಆಮದು ನಿಲ್ಲಿಸಲು ಸಿ.ಎಂ ಬಳಿ ನಿಯೋಗ ಹೋಗಿದ್ದು ಇದೀಗ ಕೇಂದ್ರದ ಗಮನ ಸೆಳೆಯಲಾಗಿದ್ದು ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ಇದೆ. ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಚೇತರಿಕೆ ಕಾಣುತ್ತದೆ ಎಂದರು.
ವೇದಿಕೆಯಲ್ಲಿ ಬೇರಳಿ ನಾಡಿನ ತಕ್ಕ ಮಳವಂಡ ಪೂಣಚ್ಚ, ಕುತ್ತ್ ನಾಡಿನ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ ಸೇರಿದಂತೆ ಮೂರು ನಾಡಿನ ವಿವಿಧ ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು. ಮಳವಂಡ ಪೂಣಚ್ಚ ಸ್ವಾಗತಿಸಿ ಕೊಡಂದೇರ ಗಣಪತಿ ವಂದಿಸಿದರು.