ಶ್ರೀಮಂಗಲ, ಡಿ. 5: ವೀರಾಜಪೇಟೆ ಕ್ಷೇತ್ರದಿಂದÀ ಹಲವು ದಶಕದಿಂದ ಹೊರಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪೊನ್ನಂಪೇಟೆ ತಾಲೂಕನ್ನು ಮರಳಿ ರಚನೆ ಮಾಡುವ ಬೇಡಿಕೆ ಸೇರಿದಂತೆ ವೀರಾಜಪೇಟೆ ತಾಲ್ಲೂಕಿನ ಜನರ ಬೇಡಿಕೆಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಆದ್ದರಿಂದ ಯಾವದೇ ಪಕ್ಷವಾದರೂ ಸಹ ಕ್ಷೇತ್ರದ ವ್ಯಾಪ್ತಿಯ ಅಭ್ಯರ್ಥಿಯನ್ನೇ ವಿಧಾನ ಸಭಾ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ಈ ವ್ಯಾಪ್ತಿಯ ಅಭಿವೃದ್ಧಿ ಕಂಡುಕೊಳ್ಳಬೇಕಾಗಿದೆ ಎಂದು ವಿವಿಧ ಮುಖಂಡರು ಪ್ರತಿಪಾದಿಸಿದರು.
ಪೊನ್ನಂಪೇಟೆ ತಾಲೂಕು ರಚನೆಗೆ 35 ದಿನಗಳಿಂದ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.
ವೀರಾಜಪೇಟೆ ತಾಲೂಕು ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಬಿ.ಡಿ.ಮುಕುಂದ, ಪತ್ರಕರ್ತ ಕೋಳೆರ ಸನ್ನು ಕಾವೇರಪ್ಪ, ತಾಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ಮೊದಲಾದವರು ಮಾತನಾಡಿದರು.
ಈ ಸಂದರ್ಭ ನಡಿಕೇರಿ ಯುವಕ ಸಂಘದ ಅಧ್ಯಕ್ಷ ಕೋಳೆರ ಬೋಪಣ್ಣ, ನಡಿಕೇರಿ ಶ್ರೀ ಗೋವಿಂದಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೋಳೆರ ನರೇಂದ್ರ, ಚೀರಂಡ ಕಂದಾ ಸುಬ್ಬಯ್ಯ, ಪೊನ್ನಂಪೇಟೆ ಗ್ರಾ.ಪಂ ಅಧ್ಯಕ್ಷೆ ಮೂಕಳೆರ ಸುಮಿತಾ, ಸದಸ್ಯೆ ಕಾವ್ಯ, ತಾ.ಪಂ ಮಾಜಿ ಉಪಾಧ್ಯಕ್ಷ ದಯಾ ಚಂಗಪ್ಪ, ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಶೇಖರ್ (ರಾಜ), ಖಜಾಂಚಿ ಬಿ.ಕೆ.ರಾಮಣ್ಣ, ಪದಾಧಿಕಾರಿಗಳಾದ ಬಿ.ಎಸ್. ರಮೇಶ್, ಪವಿತ್ರ, ಸುಂದರ, ದೇವಪ್ಪ, ಕಿಶಾನ್ ಕುಮಾರ್, ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ, ಕಾನೂನು ಸಲಹೆಗಾರ ಮತ್ರಂಡ ಅಪ್ಪಚ್ಚು, ಜಿಲ್ಲಾ ವಾಕ್ಫ್ ಮಂಡಳಿಯ ಉಪಾಧ್ಯಕ್ಷ ಆಲೀರ ಎರ್ಮು ಹಾಜಿ, ಕೋಳೇರ ನಂಜಪ್ಪ, ಪ್ರಭಾಕರ್ ಮಾಸ್ಟರ್, ಕೋಳೆರ ಲೀಲಾವತಿ, ಬೊಟ್ಟಂಗಡ ದಶಮಿ, ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ, ಪೊನ್ನಂಪೇಟೆ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಚೆರಿಯಪಂಡ ಕಾಶಿಯಪ್ಪ, ಎಪಿಎಸಿಎಂಎಸ್ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ, ಜಿ.ಪಂ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ತಾಲೂಕು ಹೋರಾಟ ಸತ್ಯಾಗ್ರಹಕ್ಕೆ ಆಗಮಿಸಿದ್ದ ಮಾಯಮುಡಿಯ ವಯೋವೃದ್ಧೆ ಮರಿಯಮ್ಮ ಅವರು ಸತ್ಯಾಗ್ರಹದಲ್ಲಿ ಭಾಗವಹಿಸಿದ ಪ್ರತಿಭಟನಾಕಾರರಿಗೆ ಚಾಕಲೆಟ್ಗಳನ್ನು ನೀಡುವ ಮೂಲಕ ಗಮನ ಸೆಳೆದರು.
ಹೋರಾಟಕ್ಕೆ ಬೆಂಬಲ
ವೀರಾಜಪೇಟೆ : ಕೊಡಗು ಜಿಲ್ಲೆಯಲ್ಲಿ ಮೂರು ತಾಲೂಕುಗಳಿದ್ದು ತಾಲೂಕಿನ ವ್ಯಾಪ್ತಿಯು ವಿಸ್ತಾರವಾಗಬೇಕಿದೆ. ಕುಗ್ರಾಮಗಳಲ್ಲಿ ವಾಸ ಮಾಡುವವರಿಗೆ ಸಂಬಂಧಪಟ್ಟ ಕಚೇರಿ ಕೆಲಸ ಕಾರ್ಯಗಳಿಗೆ ಹೋಗುವಲ್ಲಿ ಬಹಳ ತ್ರಾಸವಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕುಗಳ ರZನೆಯಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವುದಕ್ಕೆ ಹಿಂದು ಮಲೆಯಾಳಿ ಅಸೋಷಿಯೇಷನ್ ಬೆಂಬಲ ವ್ಯಕ್ತ ಪಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಕೆ.ಬಿ ಹರ್ಷವರ್ಧನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಲ್ಲೆಯಲ್ಲಿ ಮತ್ತೆರಡು ತಾಲೂಕುಗಳು ರಚನೆಯಾದರೆ ಸುತ್ತಮುತ್ತಲಿನ ಜನತೆಗೆ ಒಳಿತಾಗುವದಲ್ಲದೆ ತಾಲೂಕಿನಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತದೆ. ಕೂಡಲೆ ಸರ್ಕಾರ ತಾಲೂಕು ರಚನೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.