ಮಡಿಕೇರಿ, ಡಿ. 2: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ವೀರಾಜಪೇಟೆ ಒಳಾಂಗಣ ಕ್ರೀಡಾಂಗಣ ಹಾಗೂ ಕೂಡಿಗೆಯ ಸಿಂಥೆಟಿಕ್ ಹಾಕಿ ಕ್ರೀಡಾಂಗಣದ ಕಾಮಗಾರಿಗಳಿಗೆ ಮಂಜೂರಾದ ಒಟ್ಟು ಅನುದಾನ ಹಾಗೂ ಬಳಕೆಯಾದ ಅನುದಾನದ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಮಾಹಿತಿ ನೀಡಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವೀರಾಜಪೇಟೆ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ದಿ. 12.3.2013 ರಂದು ರೂ. 326.66 ಲಕ್ಷಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಈ ಕಾಮಗಾರಿಯನ್ನು ಟೆಂಡರ್ ನಿಯಮದಂತೆ ಪ್ರಾರಂಭಿಸಿದ ಒಂದು ವರ್ಷ ಅಂದರೆ 2014ರ ಮಾರ್ಚ್ 11 ರೊಳಗೆ ಪೂರ್ಣಗೊಳಿಸಬೇಕಾಗಿತ್ತು, ಕಾಮಗಾರಿ ಪ್ರಗತಿಯಾಧರಿಸಿ ಒಟ್ಟು ರೂ. 119.75 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿರುವ ಹಿನ್ನೆಲೆ ಉಳಿಕೆ ಅನುದಾನ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ದಂಡನಾಕ್ರಮ ಕೈಗೊಳ್ಳಲಾಗುತ್ತದೆ.
ಸೋಮವಾರಪೇಟೆ ತಾಲೂಕಿನ ಕೂಡಿಗೆ ಕ್ರೀಡಾ ಶಾಲೆಯ ಆವರಣದಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಅಳವಡಿಸುವ ಕಾಮಗಾರಿಯ ಅಂದಾಜು ಮೊತ್ತ ರೂ. 349.96 ಲಕ್ಷಗಳಾಗಿದ್ದು, ಗುತ್ತಿಗೆದಾರರಿಗೆ ರೂ. 342.05 ಲಕ್ಷಗಳಿಗೆ 2014ರ ಫೆಬ್ರವರಿ 24 ರಂದು ಕಾರ್ಯಾದೇಶ ನೀಡಲಾಗಿದೆ. ಈ ಕಾಮಗಾರಿಗೆ ಅಳವಡಿಸುವ ಸಿಂಥೆಟಿಕ್ ಹಾಕಿ ಟರ್ಫ್‍ನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು 2015 ರ ಡಿಸೆಂಬರ್ 1 ರಂದು ರೂ. 1,92,78,000 ಗಳಿಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಲೆಟರ್ ಆಫ್ ಕ್ರೆಡಿಟ್ ತೆರೆಯಲಾಗಿದೆ.
ಸಿಂಥೆಟಿಕ್ ಹಾಕಿ ಟರ್ಫ್ ಸಾಮಗ್ರಿಯು ಕಾಮಗಾರಿ ಸ್ಥಳಕ್ಕೆ 2016 ರ ಫೆಬ್ರವರಿ 28 ರಂದು ಪೂರ್ಣ ಪ್ರಮಾಣದಲ್ಲಿ ಸರಬರಾಜಾಗಿರುತ್ತದೆ. ಗುತ್ತಿಗೆದಾರರಿಗೆ ಇಲ್ಲಿಯವರೆಗೂ ಹಾಕಿ ಟರ್ಫ್ ಸರಬರಾಜಿಗೆ ರೂ. 96.39 ಲಕ್ಷಗಳು ಹಾಗೂ ಸಿವಿಲ್ ಕಾಮಗಾರಿಗೆ ರೂ. 45.35 ಲಕ್ಷಗಳು ಒಟ್ಟು ರೂ. 1,42,74,249 ಗಳನ್ನು ಪಾವತಿಸಲಾಗಿದೆ.
ವೀರಾಜಪೇಟೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಯನ್ನು ಗುತ್ತಿಗೆದಾರರು ಸ್ಥಗಿತ ಗೊಳಿಸಿರುವ ಹಿನ್ನೆಲೆ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ದಂಡನಾ ಕ್ರಮದ ಪ್ರಕ್ರಿಯೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಶೀಘ್ರ ಕಾಮಗಾರಿಯನ್ನು ಪುನರಾರಂಭಿಸಲು ನಿಯಮಾನುಸಾರ ಕ್ರಮವಹಿಸ ಲಾಗುವದು ಎಂದರು.
ಕೂಡಿಗೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿಗೆ ಸಂಬಂಧಿಸಿ ದಂತೆ ಮಳೆಗಾಲದಲ್ಲಿ ಆಸ್ಫಾಲ್ಟಿಂಗ್ ಕಾಮಗಾರಿಯನ್ನು ನಿರ್ವಹಿಸಲು ಸಾಧ್ಯವಾಗದೇ ಇರುವದರಿಂದ ಕಾಮಗಾರಿ ವಿಳಂಭವಾಗಿದೆ. ಆಸ್ಫಾಲ್ಟಿಂಗ್ ಕಾಮಗಾರಿ, ಹಾಕಿ ಸಿಂಥೆಟಿಕ್ ಟರ್ಫ್ ಅಳವಡಿಸುವದು, ಸಂಪ್‍ಟ್ಯಾಂಕ್ ನಿರ್ಮಿಸುವದು, ಸ್ಪಿಂಕ್ಲರ್ ಅಳವಡಿಸುವ ಕಾಮಗಾರಿಗಳು ಪ್ರಸ್ತುತ ಬಾಕಿ ಉಳಿದಿದ್ದು, ಶೀಘ್ರ ಕಾಮಗಾರಿ ಆರಂಭಿಸಿ, ಎಲ್ಲಾ ಕಾಮಗಾರಿಗಳನ್ನು 2018ರ ಮಾರ್ಚ್ 31 ರೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವದು ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾಹಿತಿ ನೀಡಿದ್ದಾರೆ.