ಸೋಮವಾರಪೇಟೆ, ಡಿ. 2: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಇಲ್ಲಿನ ಜೇಸೀ ವೇದಿಕೆ ಸಮೀಪ ನಿರ್ಮಿಸಲಾಗಿರುವ ರೂ. 9.95 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕದಲ್ಲೇ ನೀರಿನ ಕೊರತೆ ಕಂಡುಬಂದಿದೆ.
ಈ ಘಟಕ ಉದ್ಘಾಟನೆಯಾಗಿ ಕೆಲ ತಿಂಗಳು ಮಾತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ನಿರ್ವ ಹಣೆಯ ಕೊರತೆ ಎದುರಾಗಿದೆ. ಪ್ರಾರಂಭದಲ್ಲಿ 5 ರೂಪಾಯಿಗೆ 20 ಲೀಟರ್ ಶುದ್ಧ ನೀರು ಮತ್ತು ಎರಡು ರೂಪಾ ಯಿಗೆ 1 ಲೀಟರ್ ನೀರು ದೊರಕುವ ಮೂಲಕ ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗುತ್ತಿತ್ತು. ಪ್ರತಿದಿನ ನೂರಾರು ಮಂದಿ ಸಾರ್ವಜನಿಕರು ಈ ಘಟಕಕ್ಕೆ ಆಗಮಿಸಿ ಕುಡಿಯುವ ನೀರನ್ನು ಕೊಂಡೊಯ್ಯುವ ಮೂಲಕ ಸರ್ಕಾರದ ಯೋಜನೆಯೊಂದು ಜನತೆಗೆ ಪ್ರಯೋಜನವಾಗಿ ಪರಿಣಮಿಸಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಈ ಘಟಕದಲ್ಲಿ 2 ರೂಪಾಯಿಗೆ ದೊರೆಯುತ್ತಿದ್ದ 1 ಲೀಟರ್ ನೀರಿನ ಸೌಲಭ್ಯ ಕಡಿತಗೊಂಡಿದೆ.
ನಾಣ್ಯವನ್ನು ಹಾಕುವ ಯಂತ್ರ ಕೆಟ್ಟುನಿಂತಿದ್ದು, ಪರಿಣಾಮ 2 ರೂಪಾಯಿಗೆ ಸಿಗುತ್ತಿದ್ದ 1 ಲೀಟರ್ ನೀರಿನ ಸೌಲಭ್ಯ ಸ್ಥಗಿತಗೊಂಡಿದೆ. ಈ ಅವ್ಯವಸ್ಥೆ ಕಳೆದ ಒಂದು ತಿಂಗಳಿನಿಂದ ಇದ್ದರೂ ಸಹ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿದಂತೆ ಕಂಡುಬಂದಿಲ್ಲ.
ಈ ಘಟಕಕ್ಕೆ ಪ್ರಾರಂಭದಲ್ಲಿ ಭಾವಚಿತ್ರ ಅಳವಡಿಸುವ ವಿಷಯದ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರಲ್ಲಿ ಇದ್ದಂತಹ ಪೈಪೋಟಿ ಘಟಕದ ದುರಸ್ತಿ ವಿಷಯದಲ್ಲಿ ಕಂಡುಬರುತ್ತಿಲ್ಲ. ಸಂಬಂಧಿಸಿದವರು ತಕ್ಷಣ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಲಿ. ತಪ್ಪಿದಲ್ಲಿ ಘಟಕಕ್ಕೆ ಬೀಗ ಜಡಿದು ಸರ್ಕಾರದ 9.95 ಲಕ್ಷ ಹಣವನ್ನು ಮಣ್ಣುಪಾಲು ಮಾಡಿದ ಅಪಕೀರ್ತಿಗೆ ಒಳಗಾಗಲಿ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.