ಮಡಿಕೇರಿ, ಡಿ. 2: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ,ತಂತ್ರಜ್ಞಾನ ಮತ್ತು ನವೀನ ಅನ್ವೇಷಣೆಗಳ ಬಳಕೆ ಎಂಬ ಕೇಂದ್ರ ವಿಷಯದಡಿ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯಮಟ್ಟದ 25ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮವಾಗಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ ಮಡಿಕೇರಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕಿರಿಯ ವಿಜ್ಞಾನಿ ಪಿ.ಎ.ನಂಜಪ್ಪ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾನೆ.
ಸಮಾರೋಪ ಸಮಾರಂಭದಲ್ಲಿ ಇಸ್ರೋ ಸಂಸ್ಥೆ ಅಧ್ಯಕ್ಷ ಎ.ಎಸ್. ಕಿರಣ್‍ಕುಮಾರ್ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾದ ಕಿರಿಯ ವಿಜ್ಞಾನಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ರಾಜ್ಯಮಟ್ಟದ ಸಮಾವೇಶದಿಂದ ರಾಷ್ಟ್ರೀಯ ಮಕ್ಕಳ ಸಮಾವೇಶಕ್ಕೆ ಆಯ್ಕೆಯಾದ ಒಟ್ಟು 30 ತಂಡಗಳಲ್ಲಿ ಕೊಡಗಿನಿಂದ ನಗರ ಪ್ರದೇಶದ ಕಿರಿಯ ವಿಭಾಗದಿಂದ ಪಿ.ಎ.ನಂಜಪ್ಪ ತಂಡ ಆಯ್ಕೆಯಾಗಿದೆ. ತಾ.27 ರಿಂದ 31 À ವರೆಗೆ ಗುಜರಾತಿನ ಅಹಮದಾಬಾದ್ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಶಾಲೆಯ ಯೋಜನಾ ತಂಡದ ನಾಯಕ ಪಿ.ಎ.ನಂಜಪ್ಪ ವಿಜ್ಞಾನ ಪ್ರಬಂಧವನ್ನು ಮಂಡಿಸಲಿದ್ದಾನೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್.ಸುರೇಶ್ ತಿಳಿಸಿದ್ದಾರೆ.
ಶಾಲೆಯ ಮಾರ್ಗದರ್ಶಿ ಶಿಕ್ಷಕಿ ಪಿ.ಎಲ್. ಚೈತ್ರಕಲಾ ಅವರ ಮಾರ್ಗದರ್ಶನದಲ್ಲಿ ತಂಡದ ನಾಯಕ ಪಿ.ಎ. ನಂಜಪ್ಪ ತಮ್ಮ ಶಾಲೆಯ ತಂಡದ ಸದಸ್ಯರಾದ ತೃಶಾ ಅಪ್ಪಣ್ಣ, ಸುನೈನಾ ಮುತ್ತಣ್ಣ, ಬಿ.ವಿ.ತ್ರೇಯಾ, ಎಸ್.ತನೀಶ್ ಅವರ ಸಹಕಾರದೊಂದಿಗೆ ಸಾಂಪ್ರಾದಾಯಿಕ ಜ್ಞಾನ ವ್ಯವಸ್ಥೆಗಳು ಎಂಬ ಶೀರ್ಷಿಕೆಯಡಿ ಉತ್ತಮ ಔಷಧೀಯ ಗುಣವುಳ್ಳ ಮದ್ದು ಸೊಪ್ಪು (ಆಟಿ ಸೊಪ್ಪು) ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ತಾವು ನಡೆಸಿದ ಸಮೀಕ್ಷೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕೈಗೊಂಡ ಪರಿಹಾರ ಕ್ರಮಗಳು ಹಾಗೂ ತೀರ್ಮಾನದಿಂದ ತಯಾರಿಸಿದ ವೈಜ್ಞಾನಿಕ ಯೋಜನಾ ಪ್ರಬಂಧವು ಅತ್ಯುತ್ತಮವಾದ ಹಿನ್ನೆಲೆಯಲ್ಲಿ ಈ ಕಿರಿಯ ವಿಜ್ಞಾನಿಯನ್ನು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಕಿರಿಯ ವಿಜ್ಞಾನಿ ಪಿ.ಎ. ನಂಜಪ್ಪ ಮಡಿಕೇರಿ ನಗರದ ಕಾಫಿ ಬೆಳೆಗಾರ ಪಾಂಡಂಡ ಅಪ್ಪÀಣ ಸುಬ್ಬಯ್ಯ ಮತ್ತು ಂiÀiಶಿಕ ಅಪ್ಪಣ್ಣ ದಂಪತಿಯ ಪುತ್ರ. ಕೊಡಗಿನಿಂದ ನಂಜಪ್ಪ ತಂಡ ಸೇರಿದಂತೆ ವಿವಿಧ ಶಾಲೆಯ ಒಟ್ಟು 10 ವಿದ್ಯಾರ್ಥಿಗಳ ತಂಡಗಳು ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ್ದಾರೆ.
ತಂಡಗಳೊಂದಿಗೆ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್, ಸಮಾವೇಶದ ಜಿಲ್ಲಾ ಶೈಕ್ಷಣಿಕ ಸಂಯೋಜಕ ಜಿ. ಶ್ರೀಹರ್ಷ, ಮಾರ್ಗದರ್ಶಿ ಶಿಕ್ಷಕರು ತೆರಳಿದ್ದರು.