ಶ್ರೀಮಂಗಲ, ಡಿ. 2: ಪೊನ್ನಂಪೇಟೆ ತಾಲೂಕನ್ನು ಮರಳಿ ಪಡೆಯಲು ಕಳೆದ 32 ದಿನಗಳಿಂದ ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯ 2ನೇ ಹಂತದ ಉಗ್ರ ಹೋರಾಟದ ರೂಪುರೇಷೆಯನ್ನು ಶನಿವಾರ ರೂಪಿಸಲಾಯಿತು.

ಪೊನ್ನಂಪೇಟೆ ಎಪಿಸಿಎಂಎಸ್ ಸಭಾಂಗಣದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯನವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ತಾಲೂಕಿಗೆ ಒಳಪಡುವ 21 ಗ್ರಾ.ಪಂ. ಪ್ರಮುಖರ ಸಮ್ಮುಖದಲ್ಲಿ ನಡೆಸಿದ ಸಭೆಯಲ್ಲಿ ಒಕ್ಕೊರಳಿನ ತೀರ್ಮಾನವನ್ನು ಕೈಗೊಳ್ಳಲಾಯಿತು.

ಅದರಂತೆ 1952ರವರೆಗೆ ‘ಕ್‍ಗ್ಗಟ್ಟ್‍ನಾಡ್’ ತಾಲೂಕು ಎಂಬ ಕೇಂದ್ರ ಕಚೇರಿಯು ಪೊನ್ನಂಪೇಟೆ ಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ತಾಲೂಕನ್ನು ರದ್ದು ಮಾಡಲಾಗಿದೆ. ಈಗ ಮತ್ತೊಮ್ಮೆ ಅದೇ ತಾಲೂಕನ್ನು ಮರಳಿ ಪಡೆಯಲು ಪೊನ್ನಂಪೇಟೆ ತಾಲೂಕು ಪನರಚನಾ ಸಮಿತಿ 2ನೇ ಹಂತದ ಉಗ್ರ ಹೋರಾಟಕ್ಕೆ ಕಾರ್ಯಯೋಜನೆ ರೂಪಿಸಿ ತಾ. 6ರಿಂದ 28ರವರೆಗೆ ದಿವಸಕೊಂದು ಪಂಚಾಯಿತಿಯಂತೆ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸಲಿದೆ.

ಈ ಸಂದರ್ಭ ಆಯಾಯ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಜನಾಂಗದ ಎಲ್ಲಾ ಕುಟುಂಬ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು, ಸ್ತ್ರಿ ಶಕ್ತಿ ಹಾಗೂ ವಿವಿಧ ಸ್ವ ಸಹಾಯ ಸಂಘಗಳು, ಯುವಕ ಯುವತಿ ಮಂಡಳಿ ಸೇರಿದಂತೆ ರಾಜಕೀಯ ರಹಿತವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಪ್ರಮುಖರು ಹಾಗೂ ಕಾರ್ಮಿಕರೂ ಬೃಹತ್ ಮಟ್ಟದಲ್ಲಿ ದಿನಂಪ್ರತಿ 2ಗಂಟೆಗಳ ಕಾಲ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ.

ಅದರಂತೆ ತಾ. 6ರಂದು ನಾಲ್ಕೇರಿ ಪಂಚಾಯಿತಿ, 7ರಂದು ಬಾಡಗ, 8ರಂದು ಕುಟ್ಟ, 9ರಂದು ಶ್ರೀಮಂಗಲ, 10ರಂದು ಟಿ.ಶೆಟ್ಟಿಗೇರಿ, 11ರಂದು ಬಿರುನಾಣಿ, 12ರಂದು ಹುದಿಕೇರಿ, 13ರಂದು ಪೊನ್ನಂಪೇಟೆ, 14ರಂದು ಅರುವತ್ತೋಕ್ಲು, 15ರಂದು ಗೋಣಿಕೊಪ್ಪ, 16ರಂದು ಬಿ.ಶೆಟ್ಟಿಗೇರಿ, 17ರಂದು ಹಾತೂರು, 18ರಂದು ಮಾಯಮುಡಿ, 19ರಂದು ತಿತಿಮತಿ, 20 ರಂದು ದೇವರಪುರ, 21ರಂದು ಬಾಳೆಲೆ, 22ರಂದು ಪೊನ್ನಪ್ಪಸಂತೆ, 23ರಂದು ನಿಟ್ಟೂರು, 24ರಂದು ಕಾನೂರು, 25ರಂದು ಬಲ್ಯಮೂಂಡೂರು, 26ರಂದು ಕಿರುಗೂರು ಗ್ರಾ.ಪಂ.ಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ತೀರ್ಮಾನ ಮಾಡಲಾಗಿದೆ ಎಂದು ಪೊನ್ನಂಪೇಟೆ ತಾಲೂಕು ಪುನರಚನಾ ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ಎಂ.ರವೀಂದ್ರ ತಿಳಿಸಿದ್ದಾರೆ.

ಈ ಸಂದರ್ಭ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಕುಂಞಂಗಡ ಅರುಣ್ ಭೀಮಯ್ಯ, ಕೋಳೆರ ದಯಾ ಚಂಗಪ್ಪ, ಚಿರಿಯಪಂಡ ಕಾಶಿಯಪ್ಪ, ಎರ್ಮು, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಚೆಟ್ಟಂಗಡ ರವಿ ಸುಬ್ಬಯ್ಯ, ಕಾಳಿಮಾಡ ಮೋಟಯ್ಯ, ಮತ್ರಂಡ ಅಪ್ಪಚ್ಚು, ತೀತಿರ ಧರ್ಮಜ ಉತ್ತಪ್ಪ, ಕಳ್ಳಂಗಡ ಶಂಭು ಗಣಪತಿ, ಮಲ್ಲಮಾಡ ಪ್ರಭು ಪೂಣಚ್ಚ, ಪ್ರಭಾಕರ್, ರಘು, ಮುಕ್ಕಾಟೀರ ಪ್ರವೀಣ್ ಭೀಮಯ್ಯ, ಕೊರಕುಟ್ಟಿರ ಸರಚಂಗಪ್ಪ, ಚೆಪ್ಪುಡಿರ ಹ್ಯಾರಿ ಸುಬ್ಬಯ್ಯ, ಕೋದೆಂಗಡ ವಿಠಲ ಸೇರಿದಂತೆ ಹಲವು ಪ್ರಮುಖರು ಸಲಹೆ ಸೂಚನೆ ನೀಡಿದರು.

ವೇದಿಕೆಯಲ್ಲಿ ಪೊನ್ನಂಪೇಟೆ ಎಪಿಎಸಿಎಂಸಿ ಸದಸ್ಯರು ಮಲ್ಲಮಾಡ ಪ್ರಭು ಪೂಣಚ್ಚ, ನಾಗರಿಕ ಹೋರಾಟ ಸಮಿತಿಯ ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ ಉಪಸ್ಥಿತರಿದ್ದರು.

32ನೇ ದಿನಕ್ಕೆ ಕಾಲಿಟ್ಟ ಹೋರಾಟ

ಪೊನ್ನಂಪೇಟೆ ತಾಲೂಕು ಪುನರಚನೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ 32ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಯಲ್ಲಿ ಪೊನ್ನಂಪೇಟೆ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಮಳೆ ಸುರಿಯುತ್ತಿದ್ದುದ್ದನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಮಳೆಯೇ ಬರಲಿ, ಬಿಸಿಲೇ ಇರಲಿ, ಬಿರುಗಾಳಿಯೇ ಬರಲಿ ಯಾವದೇ ಅಡೆತಡೆ ಬಂದರೂ ಹೋರಾಟವನ್ನು ನಿಲ್ಲಿಸೆವು. ಪೊನ್ನಂಪೇಟೆ ತಾಲೂಕನ್ನು ಮರಳಿ ಪಡೆದೇ ಪಡೆಯುತ್ತೇವೆ, ಎಲ್ಲಾ ಸೌಕರ್ಯ ಇರುವ ಎಲ್ಲಾ ಕಚೇರಿಗಳಿರುವ ಪೊನ್ನಂಪೇಟೆಯನ್ನು ಮರಳಿ ತಾಲೂಕು ಕೇಂದ್ರವಾಗಿ ಸ್ಥಾಪಿಸಬೇಕು. ತಾಲೂಕು ರಚನೆಯಾಗುವವರೆಗೆ ಹೋರಾಟ ಮಾಡಿಯೇ ಮಾಡುತ್ತೇವೆಂಬ ಘೋಷಣೆಯೊಂದಿಗೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರು.

ನಾಗರಿಕ ಹೋರಾಟ ಸಮಿತಿಯ ಉಪಾಧ್ಯಕ್ಷ ಚೆಪ್ಪುಡೀರ ಸೋಮಯ್ಯ ನಾಗರಿಕ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಮತ್ರಂಡ ಅಪ್ಪಚ್ಚು ಮಾತನಾಡಿ ಹೋರಾಟಕ್ಕೆ ಸಹಕರಿಸಬೇಕೆಂದು ಕೋರಿದರು.

ಈ ಸಂದರ್ಭ ಕಾಂಡೇರ ಸುರೇಶ್, ಕೊಣಿಯಂಡ ತಿಮ್ಮಯ್ಯ, ಚೆಪ್ಪುಡಿರ ಪೊನ್ನಪ್ಪ, ಚೇಂದಿರ ಅಪ್ಪಯ್ಯ ಕೋಂದೆಂಗಡ ವಿಠಲ, ಕಾಳಿಮಾಡ ಮೋಟಯ್ಯ, ಪ್ರಭಾಕರ್, ಐನಂಡ ಬೋಪಣ್ಣ ಮತ್ತಿತರರು ಮಾತನಾಡಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.