ಮಡಿಕೇರಿ, ಡಿ. 2: ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ, ವಿರೋದಾಭಾಸಗಳ ನಡುವೆ ಮುಂದುವರೆದಿರುವ ಒಳಚರಂಡಿ ಯೋಜನೆ ಕಾಮಗಾರಿಗೆ ಸ್ವತಃ ವರುಣನಿಂದಲೇ ತೊಡರುಗಾಲಾಗಿ ರುವ ದೃಶ್ಯ ಇಲ್ಲಿನ ಕೊಡವ ಸಮಾಜ ಬಳಿ ಗೋಚರಿಸಿದೆ.ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗದಿಂದ ಕೊಡವ ಸಮಾಜಕ್ಕಾಗಿ ಓಂಕಾರೇಶ್ವರ ದೇವಾಲಯದತ್ತ ತೆರಳುವ ಈ ಮಾರ್ಗದಲ್ಲಿ ಈಗ ಅಲ್ಲಲ್ಲಿ ರಸ್ತೆ ನಡುವೆ ತೆಗೆದಿರುವ ಗುಂಡಿಗಳು ಕೆಸರುಮಯವಾಗಿ ಸಾರ್ವಜನಿಕರು ತಿರುಗಾಡಲೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರ ವಿರೋಧದ ನಡುವೆ ಅವೈಜ್ಞಾನಿಕವಾಗಿ ಮಡಿಕೇರಿಯಲ್ಲಿ ಮುಂದುವರೆದಿರುವ ಈ ಕಾಮಗಾರಿ ಪ್ರಸಕ್ತ ಮಳೆಯಿಂದ ಮತ್ತಷ್ಟು ಸಮಸ್ಯೆ ಉಂಟು ಮಾಡಿರುವದು ಗೋಚರಿಸಿದೆ.

ಅಲ್ಲದೆ ನಗರಸಭೆಯಿಂದ ಗುಂಡಿ ಬಿದ್ದಿರುವ ರಸ್ತೆಗಳ ಕಾಮಗಾರಿಗೆ ಈಗಿನ ಮಳೆಯ ವಾತಾವರಣ ತೊಡಕುಂಟುಮಾಡಿದೆ. ಒಂದೆಡೆ ಹದಗೆಟ್ಟಿರುವ ರಸ್ತೆಗುಂಡಿಗಳು, ಇನ್ನೊಂದೆಡೆ ಪ್ರಾಕೃತಿಕವಾಗಿ ವರುಣನ ಮುನಿಸು ಮಡಿಕೇರಿ ಜನತೆಯೊಂದಿಗೆ ಪ್ರವಾಸಿಗರಿಗೂ ಶಾಪಗ್ರಸ್ತವೆನಿಸುವಂತಾಗಿದೆ.