ಸಿದ್ದಾಪುರ, ಡಿ. 2: ಮೊಬೈಲ್ ಬಳಕೆಯಿಂದ ದಾರಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿದಾರಿಗೆ ತಂದು ಸಮಾಜ ಸೇವೆಯ ಮಾರ್ಗದರ್ಶನ ನೀಡುತ್ತಿರುವ ಸಂಘಟನೆಯಾಗಿ ಸ್ನೇಹ ತೀರಂ ವಾಟ್ಸಪ್ ಗ್ರೂಪ್ ಕಾರ್ಯಾಚರಿಸುತ್ತಿದೆ.

ಸಮಾಜ ಸೇವೆಯ ಉದ್ದೇಶದಿಂದ ಹುಂಡಿ ಗ್ರಾಮದ ಯುವಕರು ಇತ್ತೀಚಿನ ವರ್ಷಗಳಲ್ಲಿ ರಚಿಸಲಾದ ಸ್ನೇಹತೀರಂ ವಾಟ್ಸಾಪ್ ಗ್ರೂಪ್ ಬಹಳ ಯಶಸ್ವಿಯಾಗಿ ಕಾರ್ಯಚರಿಸುತ್ತಾ ಬರುತ್ತಿದ್ದು, ಇದರ 2ನೇ ವಾರ್ಷಿಕೋತ್ಸವ ನಡೆಯಿತು. ಈಗಾಗಲೇ ಕೆಲವು ಬಡ ರೋಗಿಗಗಳಿಗೆ ಧನ ಸಹಾಯ ನೀಡಿ, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿ ಅವರಿಗೆ ಬೇಕಾದ ಎಲ್ಲಾ ಸಹಾಯಗಳನ್ನು ಮಾಡುವ ಮೂಲಕ ಸ್ನೇಹತೀರಂ ವಾಟ್ಸಾಪ್ ಗ್ರೂಪ್ ನೆರವಾಗಿದೆ.

ಗ್ರಾಮ ಪಂಚಾಯಿತಿಯಿಂದ ಹುಂಡಿಯ 50ರಷ್ಟು ಮನೆಗಳಿಗೆ ತಿಂಗಳು ಘಟ್ಟಲೇ ನೀರಿಲ್ಲದೇ ಬಳಲುತ್ತಿರುವ ಸಂದರ್ಭದಲ್ಲಿ ಗ್ರೂಪ್ ಸದಸ್ಯರು ಮನೆಮನೆಗೆ ನೀರು ತಲುಪಿಸಿಕೊಟ್ಟು ಗ್ರಾಮದವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರೂಪಿನ 2ನೇ ವಾರ್ಷಿಕೋತ್ಸವ ಅಂಗವಾಗಿ ಪುನರ್ ನಿರ್ಮಾಣವಾಗುತ್ತಿರುವ ಹುಂಡಿ ಜುಮಾ ಮಸೀದಿಗೆ 50 ಚೀಲ ಸಿಮೆಂಟ್, ನೂತನವಾಗಿ ನಿರ್ಮಾಣ ವಾದ ಮರ್ಕಝ್ ಶಾಲಾ ಕಟ್ಟಡಕ್ಕೆ ಧ್ವನಿವರ್ಧಕ ಸೇರಿದಂತೆ ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಾಟ್ಸಪ್ ಗ್ರೂಪ್ ಯುವಕರ ಸೇವೆಗೆ ಸಾರ್ವಜನಿಕರು ಅಭಿನಂದಿಸಿದ್ದಾರೆ. ಶಾಲಾ ಸಭಾಂಗಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಖ್ಯಾತ ಭಾಷಣಗಾರ ಶಾಕಿರ್ ಬಾಖವಿ ಮಂಬಾಡ್ ಅವರು ‘ತಾಯಿಯ ಮಹತ್ವ’ ಎಂಬ ವಿಷಯದಲ್ಲಿ ಭಾಷಣ ಮಾಡಿದರು. ಹಂಸ ಅನ್ವರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ನೇಹ ತೀರಂ ಗ್ರೂಪ್ ಅಡ್ಮಿನ್ ಉನೈಸ್, ಉಪಾಧ್ಯಕ್ಷ ಜಾಫರ್, ಪ್ರಧಾನ ಕಾರ್ಯದರ್ಶಿ ಅಬೂ ತಾಹಿರ್, ಗ್ರಾಮದ ಹಿರಿಯರಾದ ಮುಸ್ತಫಾ ಸಖಾಫಿ, ಬಿ.ಕೆ. ಅಬುಬಕ್ಕರ್, ಕೆ.ಯು. ಯೂಸಫ್, ನಾಸರ್ ಮುಸ್ಲಿಯಾರ್, ಕೆ.ಎಚ್. ಸೈದು, ಪಿ.ಎಂ. ಮೊಯಿದೀನ್, ಸಿ.ಎ ಹಂಸ, ಹನೀಫ್ ಹಿಮಮಿ ಕೋಯ ಹೊಳಮಾಲ ಉಪಸ್ಥಿತರಿದ್ದರು.