ಸೋಮವಾರಪೇಟೆ, ಡಿ. 2: ಅಂಗನವಾಡಿ ಕೇಂದ್ರಗಳು ಗ್ರಾಮೀಣ ಭಾಗದ ಮಕ್ಕಳಿಗೆ ಪೂರ್ವ ಪ್ರಾಥಮಿಕ ವಿದ್ಯಾಕೇಂದ್ರಗಳಾಗಿದ್ದರೆ, ಮಹಿಳೆಯರಿಗೆ ಆರೋಗ್ಯ ಕೇಂದ್ರಗಳಾಗಿವೆ. ಇವುಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಚ್. ತಿಮ್ಮಯ್ಯ ಹೇಳಿದರು.
ಸಮೀಪದ ಅಬ್ಬೂರುಕಟ್ಟೆ ಆಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿ ಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಳೆಯ ಮಕ್ಕಳಿಗೆ ಪೂರ್ವ ಶಿಕ್ಷಣ ನೀಡುತ್ತಾ ಭವಿಷ್ಯದ ಪ್ರಜೆಗಳನ್ನು ನಿರ್ಮಾಣ ಮಾಡುತ್ತಿದ್ದ ಕೇಂದ್ರಗಳಿಗೆ ಗ್ರಾಮದ ಜನತೆಗೆ ಆರೋಗ್ಯದ ಬಗ್ಗೆ ತಿಳಿಹೇಳುತ್ತಾ, ಅರ್ಹರಿಗೆ ಪೌಷ್ಟಿಕಾಂಶ ಯುಕ್ತ ಆಹಾರ ಪದಾರ್ಥಗಳನ್ನು ವಿತರಿಸುವ ಕೇಂದ್ರಗಳಾಗಿ ಪರಿವರ್ತನೆಯಾಗಿದೆ ಎಂದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಸ್. ಮಹೇಶ್ ಮಾತನಾಡಿ, ಮಕ್ಕಳಿಗೆ ಮೊದಲ ಪಾಠಶಾಲೆ ಮನೆಯಾಗಿದ್ದರೆ, ನಂತರದ ಶಾಲೆ ಅಂಗನವಾಡಿ ಕೇಂದ್ರಗಳಾಗಿರುತ್ತದೆ. ಈ ಕೇಂದ್ರಗಳಲ್ಲಿ ಕಲಿಯುವ ಆಟ-ಪಾಠಗಳು ಮಕ್ಕಳ ಮನದಾಳದಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟ್ಟ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಅಬ್ಬೂರುಕಟ್ಟೆ ಅಂಗನವಾಡಿ ಕೇಂದ್ರದ ಎಲ್ಲಾ ಮಕ್ಕಳಿಗೆ ಸ್ಥಳೀಯರಾದ ಚಂದ್ರಶೇಖರ್‍ರವರು, ಉಳಿದಂತೆ ಮೂರು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಯಲಕನೂರು-ಹೊಸಳ್ಳಿ, ಆಡಿನಾಡೂರು, ಅರೆಯೂರು, ಅಬ್ಬೂರುಕಟ್ಟೆ ವ್ಯಾಪ್ತಿಯ 9 ಸ್ತ್ರೀ ಶಕ್ತಿ ಸಂಘಗಳ ವತಿಯಿಂದ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಕೆ. ಶೀಲಾ, ನೇರುಗಳಲೆ ಶಾಲಾ ಶಿಕ್ಷಕಿ ಪವಿತ್ರ, ಅಂಗನವಾಡಿ ಕೇಂದ್ರದ ಶಿಕ್ಷಕಿ ಫಿಲೋಮಿನ ಪಿಂಟೋ ಉಪಸ್ಥಿತರಿದ್ದರು.