ಕೂಡಿಗೆ, ಡಿ. 2: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಆರಂಭದಲ್ಲೇ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಾಮಚಂದ್ರ ಮತ್ತು ಕೆ.ವೈ. ರವಿ ಅವರು ಹಲವಾರು ಮಾಸಿಕ ಸಭೆಗಳಲ್ಲಿ ಕೂಡಿಗೆ ವ್ಯಾಪ್ತಿಯ ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನಗಳನ್ನು ಹಂಚಲು ಚರ್ಚಿಸಿದ್ದರೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸ್ಪಂದನೆ ಇದುವರೆಗೂ ದೊರೆತಿಲ್ಲ ಎಂದು ಆಕ್ಷೇಪಿಸಿದರು.
ಕಳೆದ ಮಾಸಿಕ ಸಭೆಯಲ್ಲೂ ನಿವೇಶನ ಹಂಚಿಕೆಗೆ ನಿರ್ಣಯ ಕೈಗೊಂಡು ತಾಲೂಕು ಮತ್ತು ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದ್ದರೂ ಈವರೆಗೂ ಯಾವದೇ ಪ್ರತಿಫಲ ದೊರೆತಿಲ್ಲ ಎಂದು ಹೆಚ್.ಎಸ್. ರವಿ, ಮೋಹಿನಿ ಸಭೆಗೆ ತಿಳಿಸಿದರು. ನಿವೇಶನ ರಹಿತರಿಗೆ ಹುದುಗೂರು ವ್ಯಾಪ್ತಿಯಲ್ಲಿ 4.5 ಎಕರೆ ಮತ್ತು ಬ್ಯಾಡಗೊಟ್ಟ ಗ್ರಾಮಗಳಲ್ಲಿ 2 ಎಕರೆ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ನಿರ್ಣಯ ಮಾಡಲಾಯಿತು. ಗ್ರಾಮಪಂಚಾಯಿತಿಗೆ ಕಂದಾಯ ಮತ್ತು ಕುಡಿಯುವ ನೀರಿನ ತೆರಿಗೆ ಬಾಕಿ ಇದ್ದು ಬಾಕಿದಾರರಿಗೆ ನೋಟೀಸ್ ಜಾರಿ ಮಾಡಿ ಒಂದು ವಾರಗಳ ಗಡುವು ನೀಡುವದು ನಂತರವೂ ತೆರಿಗೆ ಪಾವತಿಸದಿದ್ದಲ್ಲಿ ನೀರು ಸರಬರಾಜು ಸ್ಥಗಿತಗೊಳಿಸುವಂತೆ ತೀರ್ಮಾನಿಸಲಾಯಿತು.
ಈ ಸಂದರ್ಭ ಸಭೆಯಲ್ಲಿ 14ನೇ ಹಣಕಾಸಿನ ಕ್ರಿಯಾ ಯೋಜನೆಯನ್ನು ತಯಾರಿಸಲಾಯಿತು. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ ನಿವೇಶನ ಹಂಚಿಕೆ ಪ್ರತೀ ಮಾಸಿಕ ಸಭೆಯ ನಿರ್ಣಯಗಳಂತೆ ಕಾರ್ಯಗತಗೊಳಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಸದಸ್ಯರ ಸಲಹೆ ಸೂಚನೆಗಳಿಗೆ ಅನುಗುಣವಾಗಿ ಕಾಮಗಾರಿಗಳನ್ನು ಕೈಕೊಳ್ಳಲಾಗುವದು. ಮೂಲಭೂತ ಸೌಕರ್ಯಗಳಾದ ಗ್ರಾಮಗಳ ಸುಚಿತ್ವ ಮತ್ತು ಬೀದಿ ದೀಪ, ಕುಡಿಯುವ ನೀರಿನ ಯೊಜನೆಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದರು. ಮಾಸಿಕ ಸಭೆಯಲ್ಲಿ ಉಪಾಧ್ಯಕ್ಷ ಕೆ.ಟಿ. ಗಿರೀಶ್, ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಮಿ ನಾಯಕ್, ಕಾರ್ಯದÀರ್ಶಿ ಕೆ.ಸಿ ರವಿ ಇದ್ದರು.