ಪೊನ್ನಂಪೇಟೆ, ಡಿ. 2: ಕೊಡಗು ಜಿಲ್ಲೆಗೆ ತೀರಾ ಹತ್ತಿರದಲ್ಲಿರುವ ಕಣ್ಣನೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ವೇಗದಿಂದ ನಡೆಯುತ್ತಿದ್ದು, ಅಂತಿಮ ಹಂತ ಸಮೀಪಿಸಿದೆ. ಕಾಮಗಾರಿ ಭರದಿಂದ ನಡೆಯುತ್ತಿದ್ದು, ಈಗಾಗಲೆ ಶೇ. 90ರಷ್ಟು ಪೂರ್ಣಗೊಂಡಿದೆ. ಒಟ್ಟು 1500ಕ್ಕೂ ಮೀರಿದ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಫೆಬ್ರವರಿ ತಿಂಗಳಾಂತ್ಯದ ವೇಳೆಗೆ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಳ್ಳ ಲಿದ್ದು, ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ಕಣ್ಣನೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಕೊಡಗು ಸೇರಿದಂತೆ ನೆರೆ ಜಿಲ್ಲೆಗಳ ಜನತೆಯ ಬಹುಕಾಲದ ನಿರೀಕ್ಷೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಲಿದೆ.
ವೀರಾಜಪೇಟೆಯಿಂದ 49 ಕಿ.ಮೀ ದೂರದಲ್ಲಿರುವ ಮಟ್ಟನೂರು ಪಟ್ಟಣದಿಂದ ಕೇವಲ 3 ಕಿ.ಮೀ ಅಂತರದಲ್ಲಿ ತಲೆ ಎತ್ತಿರುವ ಕಣ್ಣನೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ದೇಶದಲ್ಲೆ ಮಾದರಿ ವಿಮಾನ ನಿಲ್ದಾಣವಾಗಿ ರೂಪುಗೊಳ್ಳುತ್ತಿರುವ ದೃಶ್ಯ ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಗೆ ಕಂಡು ಬಂತು.
ಕೆ.ಐ.ಎ.ಎಲ್ ವತಿಯಿಂದ ಒಟ್ಟು 1892 ಕೋಟಿ ವೆಚ್ಚದಲ್ಲಿ ಕಳೆದ 2013ರ ನವೆಂಬರ್ 25ರಂದು ಆರಂಭಗೊಂಡ ಕಣ್ಣನೂರು ವಿಮಾನ ನಿಲ್ದಾಣ ಯೋಜನೆ 4 ವರ್ಷ ಪೂರೈಸಿದೆ.
ಸಿದ್ಧಗೊಂಡಿರುವ ರನ್ ವೇ ಯಲ್ಲಿ ದೀಪ ಅಳವಡಿಸುವ ಮತ್ತು ಗುರುತಿನ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ವಿದೇಶದಿಂದ ಆಗಮಿಸಿರುವ ತಂತ್ರಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ. ಒಳಾಂಗಣದ ಅಂತಿಮ ಹಂತದ ಕೆಲಸ ಮುಕ್ತಾಯದ ಹಂತದಲ್ಲಿದೆ. ಟರ್ಮಿನಲ್ ಕಟ್ಟಡದ ಮೇಲ್ಭಾಗವನ್ನು ಪ್ರಯಾಣಿಕರ ನಿರ್ಗಮನ ಮತ್ತು ಆಗಮನಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ.
ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳು ಇಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ.
ಯೋಜನೆಯ ಇನ್ನುಳಿದ ಶೇ. 10ರಷ್ಟು ಕಾಮಗಾರಿ ಕೌಶಲ್ಯಯುತ ಕೆಲಸಗಾರರೆ ನಿರ್ವಹಿಸಬೇಕಾದ್ದರಿಂದ ಸಮಯಾವಕಾಶ ಬೇಕಾಗುತ್ತದೆ. ಆದರೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಯೋಜನೆಯ ಮೇಲ್ವಿಚಾರಕ ಅಭಿಯಂತರರಲ್ಲಿ ಒಬ್ಬರಾದ ನಿಕಿಲ್ ತಿಳಿಸಿದ್ದಾರೆ. ಒಟ್ಟು ಮೂರು ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳಿಸಲು ಉದ್ದೇಶಿಸಲಾಗಿರುವ ಕಣ್ಣನೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಭವಿಷ್ಯದಲ್ಲಿ ದೇಶದಲ್ಲೇ ಮಾದರಿ ವಿಮಾನ ನಿಲ್ದಾಣವಾಗಲಿದೆ.
-ವಿಶೇಷ ವರದಿ-ರಫೀಕ್ ತೂಚಮಕೇರಿ