* ವೀರಾಜಪೇಟೆ, ಡಿ. 1: ಬಿಟ್ಟಂಗಾಲ-ರುದ್ರುಗುಪ್ಪೆ ದೂರವಾಣಿ ವಿನಿಮಯ ಕೇಂದ್ರದವರೆಗೆ ನಡೆಸುತ್ತಿರುವ ರಸ್ತೆ ಕಾಮಗಾರಿ ಅಗಲಿಕರಣ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿ ಬೇರಳಿನಾಡು ಮತ್ತು ಕುತ್ತುನಾಡು ಗ್ರಾಮಸ್ಥರು ರಸ್ತೆ ತಡೆ ಹಾಗೂ ದಿಢೀರ್ ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖಾ ಅಭಿಯಂತರ ಯತೀಶ್ ಅವರನ್ನು ತೀವ್ರ ತರಾಟೆಗೆ ತೆಗದುಕೊಂಡರು.

ಬಿಟ್ಟಂಗಾಲ ಜಂಕ್ಷನ್‍ನಿಂದ ರುದ್ರುಗುಪ್ಪೆ ದೂರವಾಣಿ ವಿನಿಮಯ ಕೇಂದ್ರದವರೆಗೆ ಅಂದಾಜು 2.5 ಕಿ.ಮೀ ರಸ್ತೆಯನ್ನು ಮುಖ್ಯಮಂತ್ರಿ ನಿಧಿಯಲ್ಲಿ ರೂ. 1.65 ಕೋಟಿಗಳ ಅನುದಾನದಲ್ಲಿ ಅಗಲಿಕರಣ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಪಿಡ್ಲ್ಯೂಡಿ ಇಲಾಖೆಯ ಯೋಜನೆಯ ಪ್ರಕಾರ ರಸ್ತೆಯು ಚರಂಡಿ ಸೇರಿ 29 ಅಡಿಗಳಷ್ಟು ಅಗಲದ ರಸ್ತೆ ನಿರ್ಮಾಣವಾಬೇಕಿದೆ. ಆದರೆ ಇಲಾಖೆಯ ನಿಯಮಾನುಸಾರ ಕಾಮಗಾರಿ ನಡೆಯುತ್ತಿಲ್ಲ. ರಸ್ತೆ ಅಗಲೀಕರಣ ಮಾಡುವಾಗ ಪ್ರಸ್ತುತ ಇರುವ ರಸ್ತೆಯ ಎರಡು ಬದಿಗಳಲ್ಲಿ 1.3 ಅಡಿಗಳಷ್ಟು ಅಗೆದು ಕಲ್ಲುಗಳನ್ನು ಹಾಕಬೇಕಿದೆ. ಕೆಲವು ಭಾಗಗಳಲ್ಲಿ ಅರ್ಧ ಅಡಿಗಳಷ್ಟು ಕಲ್ಲನ್ನು ಹಾಕಿಲ್ಲವೆಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮಸ್ಥರಾದ ಉಮೇಶ್ ಕೇಚಮಯ್ಯ ಅಭಿಯಂತರರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಗುತ್ತಿಗೆದಾರರು ಕಾಮಗಾರಿ ನಡೆಸುವಾಗ ತಾವು ಬಂದು ನೋಡುವದಿಲ್ಲ. ನಮ್ಮ ತೆರಿಗೆಯ ಹಣದಲ್ಲಿ ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿರುವದು. ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವದರಿಂದ ರಸ್ತೆ ತಿರುವುಗಳಲ್ಲಿ ಅಗಲೀಕರಣ ಮಾಡದಿದ್ದರೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅಪ್ಪ್ಪಾಂಡೆರಂಡ ಭವ್ಯ ಚಿಟ್ಟಿಯಣ್ಣ ಮಾತನಾಡಿ ಸರ್ಕಾರದ ಕ್ರಿಯಾ ಯೋಜನೆ ಹಾಗೂ ನಕ್ಷೆಯ ಪ್ರಕಾರ ಕಾಮಗಾರಿ ನಡೆಸಬೇಕಿದೆ. ಇಲ್ಲಿ ಗಮನಿಸಿದರೆ ಕೆಲವು ಕಡೆಗಳಲ್ಲಿ ರಸ್ತೆ ಅಗಲೀಕರಣಕ್ಕೆ ತೊಂದರೆ ಉಂಟಾಗುತ್ತಿದೆ. ಆದರೆ ನಾವು ಯಾವದೇ ಕಾರಣಕ್ಕೂ ಕಳಪೆ ಕಾಮಗಾರಿಗೆ ಅವಕಾಶ ನೀಡುವದಿಲ್ಲ. ಗ್ರಾಮಸ್ಥರಿಗೆ ಉತ್ತಮ ರಸ್ತೆ ಮಾಡಿಕೊಡುವದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ಅಭಿಯಂತರ ಯತೀಶ್ ಅವರನ್ನು ಮಾಹಿತಿ ಬಯಸಿದಾಗ ಗುತ್ತಿಗೆದಾರ ನಿಯಮಾನುಸಾರ ಕಾಮಗಾರಿ ನಡೆಸುತ್ತಿದ್ದಾರೆ. ಕಾಮಗಾರಿ ಉತ್ತಮವಾಗಿದೆ. ಕೆಲವು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ತೋಟಗಳಿರುವದರಿಂದ ತೋಟ ಮಾಲೀಕರು ಅಡ್ಡಿಪಡಿಸುತ್ತಿದ್ದಾರೆ. ಮೊದಲ ಹಂತದ ಕಾಮಗಾರಿ ನಡೆಯುತ್ತಿರುವದರಿಂದ ಸಣ್ಣ ಪುಟ್ಟ ಸಮಸ್ಯೆಗಳು ಬರುತ್ತದೆ. ತೋಟ ಮಾಲೀಕರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದರು.

ಈ ಸಂದರ್ಭ ಗೋಣಿಕೊಪ್ಪ ಆರ್‍ಎಂಸಿ ಸದಸ್ಯೆ ಕಡೇಮಾಡ ಕುಸುಮಾ, ಕಂಜಿತಂಡ ಮಂದಣ್ಣ, ಕೊಲ್ಲಿರ ಬೋಪಣ್ಣ, ಕಂಜಿತಂಡ ಗಿಣಿ ಮೊಣ್ಣಪ್ಪ, ಅಪ್ಪ್ಪಾಂಡೆರಂಡ ಮೋಹನ್, ಕೋಲತಂಡ ರಘು ಮಾಚಯ್ಯ, ಅಮ್ಮಣಿಚಂಡ ರಂಜಿ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯರಾದ ಕೊಂಗಂಡ ಕಾಶಿ ಕಾರ್ಯಪ್ಪ, ನಂಬುಡುಮಾಡ ಪವಿ ಪೂವಯ್ಯ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.