ಸೋಮವಾರಪೇಟೆ, ಡಿ. 1: ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ಪೂರ್ವ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಛದ್ಮವೇಷ ಸ್ಪರ್ಧೆ, ನೃತ್ಯಸ್ಪರ್ಧೆ ಪ್ರೇಕ್ಷಕರ ಮನರಂಜಿಸಿತು. ವಾರ್ಷಿಕೋತ್ಸವ ಕಾರ್ಯಕ್ರಮವನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಗ್ರಾಮೀಣ ಭಾಗದ ರೈತರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದರು.

ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡುವದು ಶಿಕ್ಷಕರ ಹಾಗೂ ಪೋಷಕರ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪೂರ್ವ ಪ್ರಾಥಮಿಕ ಶಾಲಾ ವ್ಯವಸ್ಥಾಪಕಿ ಕವಿತಾ ವಿರೂಪಾಕ್ಷ, ಕಾರ್ಯದರ್ಶಿ ಸಂಗೀತಾ ದಿನೇಶ್, ಉಪಾಧ್ಯಕ್ಷೆ ಚಂದ್ರಿಕಾ ಕುಮಾರ್, ಖಜಾಂಚಿ ಲಾವಣ್ಯ ಮೋಹನ್, ಕುವೆಂಪು ಶಾಲೆಯ ಮುಖ್ಯೋಪಾಧ್ಯಾಯರಾದ ಮಿಲ್‍ಗ್ರೆಡ್ ಗೊನ್ಸಾಲ್ವೇಸ್ ಮತ್ತಿತರರು ಇದ್ದರು.