ವೀರಾಜಪೇಟೆ, ಡಿ. 1: ಕೇಂದ್ರದ ನರೇಂದ್ರ ಮೋದಿ ಸರ್ಕಾರ 2011 ರ ಜನಸಂಖ್ಯಾ ಆಧಾರದ ಮೇಲೆ ಆಯ್ದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ ಮಾಡಿ ದೇಶವನ್ನು ಹೊಗೆ ಮುಕ್ತ ಮಾಡಲು ನಿರ್ಧರಿಸಿರುವದರಿಂದ ಪ್ರತಿಯೊಬ್ಬ ಬಡ ಕಾರ್ಮಿಕ ಕುಟುಂಬಗಳು ಇದರ ಪ್ರಯೋಜನ ಪಡೆಯುವಂತಾಗಬೇಕು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಮರ ಕಾಲೋನಿ ಯಲ್ಲಿ ಬಡ ಕಾರ್ಮಿಕ ಕುಟುಂಬಗಳ ಮಹಿಳೆಯರಿಗೆ ಗ್ಯಾಸ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗ್ಯಾಸ್ ವಿತರಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಮಾತನಾಡಿ, ಪ್ರತಿಯೊಬ್ಬರು ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸಬೇಕು. ಸರ್ಕಾರದ ಸೌಲಭ್ಯ ಗಳನ್ನು ಪಡೆದುಕೊಳ್ಳುವ ಮೂಲಕ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಬಿ.ಜೆ.ಪಿ. ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಮಾತನಾಡಿ, ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೊಡಗಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಹಾಗೂ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಮಾಡಲಾಗಿತ್ತು. ಅದರೆ ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಸ್ತೆಗಳ ಗುಂಡಿ ಮುಚ್ಚಲು ಸಾಧ್ಯವಾಗುತಿಲ್ಲ ಎಂದು ದೂರಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಬಿಜೆಪಿ ಸಮಿತಿಯ ಪ,ಪಂಗಡದ ತಾಲೂಕು ಅಧ್ಯಕ್ಷ ಎಂ.ಎಂ. ಪರಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಲ್ಲಿ ಕೆದಮುಳ್ಳೂರು ವ್ಯಾಪ್ತಿಯಲ್ಲಿ ಇದಕ್ಕೂ ಮೊದಲು 28 ಕುಟುಂಬಗಳಿಗೆ ಉಚಿತ ಗ್ಯಾಸ್ ನೀಡಲಾಗಿತ್ತು. ಈಗ ಎರಡನೇ ಹಂತದಲ್ಲಿ 22 ಮಂದಿ ಮಹಿಳೆಯರಿಗೆ ಗ್ಯಾಸ್ ವಿತರಿಸಲಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಬಿ.ಹೆಚ್. ಕಿರಣ್ ಕುಮಾರ್, ಮಾಜಿ ಸೈನಿಕರ ಸಹಕಾರ ಸಂಘದ ಉಪಾಧ್ಯಕ್ಷ ರಮೇಶ್ ಕರುಂಬಯ್ಯ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಉಮ್ಮರ್, ಬಿಜೆಪಿ ಸ್ಥಾನೀಯ ಸಮಿತಿಯ ಕೆ.ಜಿ. ಗುರುರಾಜ್ ಹಾಗೂ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.