ಸೋಮವಾರಪೇಟೆ, ಡಿ.1: ಸರ್ವಶಕ್ತನಾದ ಭಗವಂತನ ಮೇಲಿನ ಭಯ ಭಕ್ತಿಯಿಂದ ಮಾತ್ರ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ಹಜ್ ಸಮಿತಿ ಸದಸ್ಯ ಹಾಗೂ ಇಲ್ಲಿನ ಜಲಾಲಿಯಾ ಮಸೀದಿಯ ಧರ್ಮಗುರು ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಲಾಲಿಯಾ ಮಸೀದಿಯ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಮಸೀದಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದರು.

ಇಂದು ಪ್ರಪಂಚವೇ ಅಂಗೈಯಲ್ಲಿದ್ದು, ಇಡೀ ವಿಶ್ವವೇ ಹತ್ತಿರವಾಗಿದ್ದರೂ ನೆರೆಮನೆಯವರು ಮಾತ್ರ ಅಪರಿಚಿತರಾಗುತ್ತಿದ್ದಾರೆ. ಎಲ್ಲಾ ಧರ್ಮಗಳಲ್ಲೂ ಉಧಾತ್ತ ಧ್ಯೇಯಗಳಿದ್ದು, ಧರ್ಮೀಯರಲ್ಲಿ ಧ್ಯೇಯಗಳು ಇಲ್ಲವಾಗಿವೆ. ಮಂದಿರ, ಮಸೀದಿ, ಚರ್ಚ್‍ಗಳಿಗೂ ಸಿ.ಸಿ. ಕ್ಯಾಮೆರಾ ಅಳವಡಿಸುವ ಸ್ಥಿತಿ ನಿರ್ಮಾಣವಾಗಿರುವದು ದುರಂತ ಎಂದು ಅಬೂಬಕರ್ ವಿಶ್ಲೇಷಿಸಿದರು.

ಮುದ್ದಿನ ಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಧರ್ಮದ ಸಾರವೂ ಒಂದೇ ಆಗಿದ್ದು, ಎಲ್ಲರೂ ಅರಿವಿನಿಂದ ಜೀವನ ಸಾಗಿಸಬೇಕು. ವಾಸ್ತವಿಕ ನೆಲೆಗಟ್ಟಿನಲ್ಲಿ ಚಿಂತಿಸುವ, ಪ್ರತಿಯೋರ್ವರನ್ನೂ ಪ್ರೀತಿಸುವ ಸಮಾಜ ನಿರ್ಮಾಣವಾಗಬೇಕು. ಭಾವರಹಿತ ಮನುಷ್ಯರೇ ಅಧಿಕವಾಗುತ್ತಿದ್ದು, ಎಲ್ಲರಲ್ಲೂ ದಯೆ, ಕರುಣೆ, ಅನುಕಂಪ ತೋರುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಉಪನ್ಯಾಸ ನೀಡಿದರು.

ಸಂತ ಜೋಸೆಫರ ಕಾಲೇಜಿನ ಪ್ರಾಂಶುಪಾಲ ಫಾ. ಟೆನ್ನಿ ಕುರಿಯನ್ ಮಾತನಾಡಿ, ಧರ್ಮಗಳ ತತ್ವಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜೀವಿಸಿದರೆ ಮಾತ್ರ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಮಾಜೀ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಸರ್ವ ಧರ್ಮಗಳ ಮಂದಿಯೂ ಸಹಬಾಳ್ವೆಯಿಂದ ಜೀವಿಸುವ ಸಮಾಜ ನಿರ್ಮಾಣವಾಗಬೇಕು. ಪರಸ್ಪರ ನಂಬಿಕೆಯ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಇಂದು ಎಲ್ಲರನ್ನೂ ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರ್ಮಿಕ ಅಸಹಿಷ್ಣುತೆ ಹಾಗೂ ಧ್ವೇಷ ಭಾವನೆ ಸಮಾಜದಿಂದ ದೂರವಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಲಾಲಿಯಾ ಮಸೀದಿ ಅಧ್ಯಕ್ಷ ಕೆ.ಎ. ಆದಂ ವಹಿಸಿದ್ದರು. ವೇದಿಕೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್, ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ, ಕರವೇ ನಗರಾಧ್ಯಕ್ಷ ಮಂಜುನಾಥ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಮುರಳೀಧರ್, ತಾಲೂಕು ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ನಗರಾಧ್ಯಕ್ಷ ಡಿ.ಪಿ. ಲೋಕೇಶ್, ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ, ಜಲಾಲಿಯಾ ಮಸೀದಿಯ ಕಾರ್ಯದರ್ಶಿ ರಫೀಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.