ಮಡಿಕೇರಿ, ಡಿ. 1: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲಿಯೇ ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಈ ಸಂಬಂಧ ಪ್ರಸ್ತುತ ಸರ್ಕಾರ ಕೈಗೊಂಡಿರುವ ಹಲವು ಜನಪರ ಕಾರ್ಯಕ್ರಮಗಳ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ಜಿಲ್ಲಾಡಳಿತ ವತಿಯಿಂದ ಹೊರತರಲಾಗುತ್ತಿದೆ. ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಪ್ರಸ್ತುತ ಸರ್ಕಾರದ ನಾಲ್ಕುವರೆ ವರ್ಷದ ಸಾಧನೆಯ ನಿಖರ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಸರ್ಕಾರದ ಕಾರ್ಯಕ್ರಮಗಳ ಅಂಕಿ ಅಂಶಗಳ ಸಹಿತ ಮಾಹಿತಿಯನ್ನು ಎಕ್ಸೆಲ್ ಹಾಗೂ ವರ್ಡ್ ಫಾರ್ಮೆಟ್‍ನಲ್ಲಿ ಒದಗಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸರ್ಕಾರದ ಕಾರ್ಯಕ್ರಮಗಳ ತಾಲೂಕುವಾರು ಮತ್ತು ಜಿಲ್ಲೆಗೆ ಸಂಬಂಧಿಸಿದಂತೆ ಅನುಬಂಧದಲ್ಲಿ ತಿಳಿಸಿರುವಂತೆ ಮಾಹಿತಿ ಒದಗಿಸಬೇಕಿದೆ. ಫಲಾನುಭವಿಗಳ ಹೆಸರು, ಸಂಖ್ಯೆ, ಮೊತ್ತ ಮತ್ತಿತರ ವಿವರವನ್ನು ತಾ. 5 ರೊಳಗೆ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಮುಖ ಯೋಜನಾ ಕಾರ್ಯಕ್ರಮಗಳ ಹೆಸರು, ಅನುದಾನ, ಮೊತ್ತ ವಿವರಗಳನ್ನು ಅನುಬಂಧ-3 ರಂತೆ ಒದಗಿಸಬೇಕು. ಹಾಗೆಯೇ ಛಾಯಾಚಿತ್ರ ಅಥವಾ ರೇಖಾಚಿತ್ರ ಸಹಿತ ಮಾಹಿತಿ ಒದಗಿಸುವಂತೆ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು.

ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಇರುವ ಕಾಮಗಾರಿಗಳ ಸಂಬಂಧ ಮಾಹಿತಿ ಒದಗಿಸುವದು. ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಅವರು ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದು, ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡುವ ಸಂದರ್ಭ ಸರ್ಕಾರ ಕೈಗೊಂಡಿರುವ ಹಲವು ಜನಪರ ಕಾರ್ಯಕ್ರಮ ಸಾಧನೆ ಬಿಂಬಿಸುವ ಪುಸ್ತಕ ವಿತರಿಸಬೇಕಿದೆ. ಆದ್ದರಿಂದ ಈ ಸಂಬಂಧ ಕೂಡಲೇ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.

ನಾಲ್ಕು ವರ್ಷದ ಸಾಧನಾ ಪುಸ್ತಕ ಮಾದರಿಯಲ್ಲಿ ಜಿಲ್ಲಾ ಸಾಧನ ಒಳಗೊಂಡ ಪುಸ್ತಕ ಪ್ರಕಟಿಸಬೇಕಾಗಿದೆ. ಆಯಾಯ ಇಲಾಖಾ ಪ್ರಗತಿಯಲ್ಲಿ ತಾಲೂಕುವಾರು ಮಾಹಿತಿ ಹಾಗೂ ಜಿಲ್ಲೆಯ ಅಂಕಿ ಅಂಶಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

ಉನ್ನತ ಶಿಕ್ಷಣ ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜು, ಬೃಹತ್ ನೀರಾವರಿ ಮತ್ತಿತರ ಇಲಾಖೆಗಳಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಜಿ.ಪಂ. ಉಪ ಕಾರ್ಯದರ್ಶಿ ಸಿದ್ದಲಿಂಗ ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಭು, ಕೃಷಿ ಇಲಾಖೆ ಉಪ ನಿರ್ದೇಶಕರಾದ ರಾಜು, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮಮ್ತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಸೆಸ್ಕ್ ಎಇಇ ದೇವಯ್ಯ, ಕೈಗಾರಿಕೆ, ಸಣ್ಣ ನೀರಾವರಿ, ಜಿಲ್ಲಾ ಸರ್ಜನ್ ಅಬ್ದುಲ್ ಅಜೀಜ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಕಾರ್ಯಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.