ಮಡಿಕೇರಿ, ಡಿ. 1: ಬೇರೊಬ್ಬರಿಗೆ ತೊಂದರೆ ನೀಡದಂತೆ ಪ್ರಜೆಗಳ ಹಕ್ಕುಗಳನ್ನು ಚಲಾಯಿಸುವ ಅವಕಾಶವನ್ನು ಭಾರತ ಸಂವಿಧಾನ ತನ್ನ ಪ್ರಜೆಗಳಿಗೆ ನೀಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಾಸ್ಟರ್ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಹೇಳಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಶ್ರೀ ರಾಜೇಶ್ವರಿ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ‘ಸಂವಿಧಾನ ದಿನಾಚರಣೆ’ ಪ್ರಯುಕ್ತ ನಗರದ ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾನೂನು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯ, ಶೋಷಣೆ ವಿರುದ್ಧ ಹಾಗೂ ಶೈಕ್ಷಣಿಕ ಹಕ್ಕುಗಳನ್ನು ಪ್ರಜೆಗಳಿಗೆ ನೀಡಿದೆ. ಜೀತ ಪದ್ಧತಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯನ್ನು ಮಾಡಿ ಪ್ರಜೆಗಳಿಗೆ ರಕ್ಷಣೆ ನೀಡುತ್ತಾ ನೊಂದಂತಹ ಪ್ರಜೆಗಳಿಗೆ ಸಂವಿಧಾನಾತ್ಮಕ ಪರಿಹಾರಗಳಿಗೆ ಅವಕಾಶ ಕಲ್ಪಿಸಿದೆ. ಭಾರತದ ಸಂವಿಧಾನವು ಜನರಿಂದ ಜನರಿಗೋಸ್ಕರ ಇರುವಂತಹ ಸರ್ಕಾರವನ್ನು ಸಂವಿಧಾನವು ನೀಡಿದೆ ಎಂದು ನುಡಿದರು.

ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತಹ ಅವಕಾಶವನ್ನು ಭಾರತ ಸಂವಿಧಾನವು ಒಳಗೊಂಡು ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ನೀಡಿದೆ. ಹಾಗೆಯೇ ಮೂಲಭೂತ ಹಕ್ಕುಗಳು ಜನರಿಗೆ ರಕ್ಷಣೆ ನೀಡುವದ ರೊಂದಿಗೆ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ್ ಮಾತನಾಡಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಮೂರನ್ನು ಒಳ ಗೊಂಡಂತಹ ಭಾರತದ ಸಂವಿಧಾನವು ವಿಶ್ವದಲ್ಲಿಯೇ ಮಾದರಿ ಸಂವಿಧಾನ ಎಂದು ತಿಳಿಸಿದರು.

ಪ್ರಕೃತಿ ಭೂಮಿ, ನೆಲ, ಜಲವನ್ನು ರಕ್ಷಣೆ ಮಾಡುವದು ಎಲ್ಲರ ಕರ್ತವ್ಯ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಸಂವಿಧಾನವನ್ನು ಅರಿತು ವಿದ್ಯೆ, ವಿನಯ ಎರಡನ್ನು ರೂಢಿಸಿಕೊಂಡು, ಬೇರೋಬ್ಬರಿಗೆ ದಾರಿ ದೀಪವಾಗಬೇಕು ಎಂದು ಕಿವಿ ಮಾತು ಹೇಳಿದರು.

ಉತ್ತಮ ಸಮಾಜ ನಿರ್ಮಾಣಕ್ಕೆ ಭಾರತ ಸಂವಿಧಾನವು ಉತ್ತಮ ಅವಕಾಶ ನೀಡುವದರೊಂದಿಗೆ ಪ್ರಜೆಗಳಿಗೆ ರಕ್ಷಣೆ ನೀಡುತ್ತಿದೆ ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಮಾತನಾಡಿ, ದಿನನಿತ್ಯದ ಕಾನೂನು ಪ್ರಜ್ಞೆ ಮತ್ತು ಕಾನೂನು ಪಾಲಿಸುವಂತಹ ಅಭ್ಯಾಸವನ್ನು ರೂಢಿಸಿಕೊಂಡಲ್ಲಿ ಉತ್ತಮ ಪ್ರಜೆಯಾಗಿ ಕಾನೂನಿಂದ ರಕ್ಷಣೆ ಪಡೆಯಬಹುದು.

ನಮ್ಮ ಜೀವನದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಕಾನೂನು ಪಾಲನೆ ಮಾಡಬೇಕು. ಮಕ್ಕಳು ಕಾನೂನು ಉಲ್ಲಂಘನೆ ಮಾಡಬಾರದು. ಕಾನೂನು ಪಾಲಿಸಿ ಸಂವಿಧಾನವನ್ನು ಗೌರವಿಸಿ ಉತ್ತಮ ಪ್ರಜೆಯಾಗಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಕೀಲ ಕೆ.ಡಿ. ದಯಾನಂದ ಮಾತನಾಡಿ, ಭಾರತ ಸಂವಿಧಾನವು ದೇಶಕ್ಕೆ ಮಾತೃ ಕಾನೂನು ಇದ್ದಂತೆ ದೇಶದ ಎಲ್ಲಾ ಕಾನೂನುಗಳು ಸಂವಿಧಾನದ ಚೌಕಟ್ಟಿನಲ್ಲಿ ರಚನೆಯಾಗಿದೆ.

ಪ್ರತಿಯೊಬ್ಬ ಪ್ರಜೆಯು ಕೂಡ ಸಂವಿಧಾನಕ್ಕೆ ಗೌರವ ನೀಡಿ ಉತ್ತಮ ರೀತಿಯಲ್ಲಿ ಕಾನೂನಿನಡಿಯಲ್ಲಿ ರಕ್ಷಣೆ ಪಡೆದು ಸುಂದರ ಜೀವನ ನಡೆಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಮತ್ತು ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಿದರು.

ಕಾನೂನು ಶಿಬಿರದಲ್ಲಿ ಶ್ರೀ ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿಗಳು ಮತ್ತು ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಗೋವಿಂದ ಸ್ವಾಮಿ, ರಾಜೇಶ್ವರಿ ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಸಚಿನ್ ವಾಸುದೇವ, ಪ್ರಾಂಶುಪಾಲ ಮಂದಣ್ಣ, ಕಾನೂನು ಸೇವಾ ಪ್ರಾಧಿಕಾರದ ಜೋಯಪ್ಪ ಇತರರು ಇದ್ದರು. ಶಿಕ್ಷಕಿ ಶಿಲ್ಪ ಸ್ವಾಗತಿಸಿ, ಶಿಕ್ಷಕ ವಿನೋದ್ ಕುಮಾರ್ ನಿರೂಪಿಸಿದರು.