ಸಿದ್ದಾಪುರ, ಡಿ. 1: ರಾಜ್ಯ ಸರಕಾರವು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಜಿಲ್ಲೆಯನ್ನು ಅನಾಥ ಮಾಡಿದೆ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು.ಅಮ್ಮತ್ತಿಯ ವಲಯ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಲ್ಲಿಯ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು, ಆದಿ ಮಾನವನ ಕಾಲದ ರಸ್ತೆಯ ರೀತಿಯಾಗಿದ್ದರೂ ಜನಪ್ರತಿನಿಧಿಗಳು ಮೌನ ವಹಿಸುತ್ತಿರುವದು ಖಂಡನೀಯ ಎಂದರು. ರಾಜ್ಯದಾದ್ಯಂತ ಜೆ.ಡಿ.ಎಸ್. ಪಕ್ಷದ ಪರ ಒಲವಿದ್ದು, ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಜೆ.ಡಿ.ಎಸ್. ಪಕ್ಷ ಅಧಿಕಾರಕ್ಕೆ ಬರಲಿದ್ದು, ಮಡಿಕೇರಿ ಕ್ಷೇತ್ರದಿಂದ ಜೀವಿಜಯ ಅವರು ಗೆಲ್ಲುವದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಲ್ಲಿರುವ ಬಿ.ಜೆ.ಪಿ. ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಶ್ರೀಮಂತರ ಪರವಾಗಿದೆ. ಸಂಸದರು ಕೇಂದ್ರದಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಪ್ರಸ್ತಾಪ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಹಿರಿಯ ಜೆ.ಡಿ.ಎಸ್. ಮುಖಂಡ ಕೆ.ಸಿ. ನಾಣಯ್ಯ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದು, ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದು ಈ ಭಾರಿ ಪಕ್ಷವನ್ನು ಜಿಲ್ಲೆ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆಂದರು.
ಪಕ್ಷದ ಹಿರಿಯ ಮುಖಂಡ ಏಜಾಸ್ ಸಾಬ್ ಮಾತನಾಡಿ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ರೈತರು ಹಾಗೂ ಬಡವರ ಪರವಾಗಿ ಕೆಲಸ ಮಾಡುತ್ತಿದ್ದು, ಜೆ.ಡಿ.ಎಸ್. ಬಡವರ ಪಕ್ಷ ಎಂದು ಬಣ್ಣಿಸಿದರು.
ಹಿರಿಯ ಮುಖಂಡ ಮ್ಯಾಥ್ಯು ಮಾತನಾಡಿ, ಸಾಲ ಮನ್ನ ಸೇರಿದಂತೆ ಸಣ್ಣ ರೈತರ ಒತ್ತುವರಿ ಜಾಗವನ್ನು ಸಕ್ರಮಗೊಳಿಸಿದ ಕೀರ್ತಿ ಜೆ.ಡಿ.ಎಸ್. ಪಕ್ಷಕ್ಕೆ ಸಲ್ಲುತ್ತದೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷವಾದ ಜೆ.ಡಿ.ಎಸ್. ರಾಜ್ಯಕ್ಕೆ ಅನಿವಾರ್ಯವಾಗಿದೆ ಎಂದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮತೀನ್ ಮಾತನಾಡಿ, ಬಿ.ಜೆ.ಪಿ.ಯು ಕೋಮುವಾದಿ ಪಕ್ಷವಾಗಿದ್ದು, ಮೋದಿ ಸರಕಾರ ಕೇವಲ ಸುಳ್ಳು ಹೇಳುವದರೊಂದಿಗೆ ಅಧಿಕಾರ ನಡೆಸುತ್ತಿದೆ. ರಾಜ್ಯ ಸರಕಾರದಿಂದ ಯಾವದೇ ಅಭಿವೃದ್ಧಿ ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ಬಾರಿ ಜೆ.ಡಿ.ಎಸ್. ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭ ಅಮ್ಮತ್ತಿ ಕಾರ್ಮಾಡು ಗ್ರಾ.ಪಂ. ಸದಸ್ಯೆ ಜಯಮ್ಮ, ಮುಖಂಡರಾದ ಅಶ್ರಫ್, ಪದ್ಮಾ ಸೇರಿದಂತೆ ಇನ್ನಿತರರು ಹಾಜರಿದ್ದರು.