ಶ್ರೀಮಂಗಲ, ಡಿ. 1: ನೂತನ ಪೊನ್ನಂಪೇಟೆ ತಾಲೂಕು ರಚನೆಯ ಬೇಡಿಕೆಗೆ ತಿತಿಮತಿ ಇಗ್ಗುತ್ತಪ್ಪ ಕೊಡವ ಕೂಟ ಮತ್ತು ಹರಿಹರದ ಪ್ರಗತಿಪರ ರೈತ ಸಂಘಟನೆ ಅಲ್ಲದೆ, ತಿತಿಮತಿ, ನೊಖ್ಯ, ಹೆಬ್ಬಾಲೆ, ಭದ್ರಗೋಳ, ದೇವರಪುರ ಗ್ರಾಮಸ್ಥರು ಭಾಗವಹಿಸುವದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ಹರಿಹರ ಪ್ರಗತಿಪರ ರೈತ ಸಂಘಟನೆಯ ಪರವಾಗಿ ಮಾತನಾಡಿದ ಬಾಚೀರ ಕಾರ್ಯಪ್ಪ ಪೊನ್ನಂಪೇಟೆ ತಾಲೂಕು ರಚನೆ ಈ ಭಾಗದ ಜನರ ನ್ಯಾಯ ಸಮ್ಮತವಾದ ಹಕ್ಕಾಗಿದೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಪ್ರಸ್ತುತ ಕೆಲಸ ಕಾರ್ಯಗಳು ನಿರೀಕ್ಷಿಸಿದ ಮಟ್ಟದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಪೊನ್ನಂಪೇಟೆ ತಾಲೂಕು ರಚನೆಯಾದರೆ ಈ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು. ಸರ್ಕಾರ ಕೂಡಲೇ ಪೊನ್ನಂಪೇಟೆ ತಾಲೂಕು ರಚನೆಗೆ ಮುಂದಾಗಬೇಕು. ಇದಕ್ಕೆ ಸಂಪೂರ್ಣ ಬೆಂಬಲ ನೀಡುವದಾಗಿ ಭರವಸೆಯನ್ನು ನೀಡಿದರು.
ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ಕಳೆದ ಒಂದು ತಿಂಗಳಿನಿಂದ ಪೊನ್ನಂಪೇಟೆ ತಾಲೂಕು ಪುರ್ನರಚನೆಗೆ ನಿರಂತರವಾಗಿ ರಾಜಕೀಯ ರಹಿತವಾಗಿ ಪ್ರತಿಭಟನೆ ನಡೆಯುತ್ತಿರುವದು ಶ್ಲಾಘನೀಯ. ಈಗಾಗಲೇ ಈ ಪ್ರತಿಭಟನೆಯಲ್ಲಿ ಸುಮಾರು 115ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳು ಬೆಂಬಲವನ್ನು ವ್ಯಕ್ತಪಡಿಸಿರುವದು ಪ್ರತಿಭಟನೆಗೆ ಹೆಚ್ಚು ಬಲವನ್ನು ನೀಡಿದಂತಾಗಿದೆ. ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿರುವ ಪೊನ್ನಂಪೇಟೆ ತಾಲೂಕು ಈ ಹಿಂದೆಯೇ ಘೋಷಣೆಯಾಗಬೇಕಾಗಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿಯಿಂದ ನೆನಗುದಿಗೆ ಬಿದ್ದಿದೆ. ಪೊನ್ನಂಪೇಟೆ ತಾಲೂಕು ರಚನೆಯಿಂದ ವೀರಾಜಪೇಟೆ ತಾಲೂಕು ಕಚೇರಿಯಿಂದ 30-40 ಕಿ.ಮೀ ಅಂತರದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ನಾಗರಿಕರಿಗೂ ಅನುಕೂಲವಾಗಲಿದೆ. ಪೊನ್ನಂಪೇಟೆ ತಾಲೂಕು ರಚನೆ ಅತ್ಯವಶ್ಯಕ. ರಾಜಕೀಯ ರಹಿತವಾಗಿ ನಡೆಯುತ್ತಿರುವ ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.
ಜಿ.ಪಂ ಸದಸ್ಯೆ ಪಂಕಜ ಮಾತನಾಡಿ ಪೊನ್ನಂಪೇಟೆ ಸುತ್ತಮುತ್ತಲಿನ 21 ಗ್ರಾ.ಪಂ ಗಳು ಗ್ರಾಮೀಣ ಭಾಗಗಳಾಗಿದ್ದು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಜನರು ವಾಸಿಸುತ್ತಿದ್ದು, ಇವರುಗಳು ಸರಕಾರದ ಸವಲತ್ತುಗಳನ್ನು ಪಡೆಯಲು ಪೊನ್ನಂಪೇಟೆ ತಾಲೂಕು ರಚನೆಯಾಗುವರೆಗೆ ನಿರಂತರ ಬೆಂಬಲವನ್ನು ನೀಡುವದಾಗಿ ಹೇಳಿದರು.
ಪೊನ್ನಂಪೇಟೆ ಹಿರಿಯ ನಾಗರಿಕಾ ವೇದಿಕೆಯ ಪರವಾಗಿ ಮಾತನಾಡಿದ ಮೂಕಳೆರ ಕುಶಾಲಪ್ಪ ಪೊನ್ನಂಪೇಟೆ ತಾಲ್ಲೂಕು ಪುನರಚನೆಗೆ ಅಗ್ರಹಿಸಿ 31 ದಿನಗಳು ನಡೆದರು ನಮ್ಮ ಜನ ಪ್ರತಿನಿಧಿಗಳಿಂದ ನಿರೀಕ್ಷಿಸಿದಷ್ಟು ಬೆಂಬಲವನ್ನು ಪಡೆದುಕೊಳ್ಳಲೂ ನಾವುಗಳು ವಿಫಲರಾಗಿದ್ದೇವೆ. ಜನ ಪ್ರತಿನಿಧಿಗಳು ಸರಕಾರದ ಮೇಲೆ ನಿರಂತರ ಒತ್ತಡವನ್ನು ಹಾಕುವ ಕೆಲಸವನ್ನು ಮಾಡಬೇಕಾಗಿತ್ತು. ಹೋರಾಟದಲ್ಲಿ ಪ್ರತಿ ಗ್ರಾಮದಿಂದ ನಾಗರಿಕರು ಜಾತಿ ಭೇದವನ್ನು ಮರೆತು, ರಾಜಕೀಯ ರಹಿತವಾಗಿ ಬಾಗಿಯಾಗಿ ಪೊನ್ನಂಪೇಟೆ ತಾಲೂಕು ರಚನೆಯಾಗುವರೆಗೆ ಬೆಂಬಲವನ್ನು ನೀಡಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಪೊನ್ನಂಪೇಟೆ ತಾಲೂಕು ರಚನೆಯ ಅಧ್ಯಕ್ಷ ಅರುಣ್ ಮಾಚಯ್ಯ, ಚೆಪ್ಪುಡಿರ ಪೊನ್ನಪ್ಪ ಮತ್ತು ಮತ್ರಂಡ ಅಪ್ಪಚ್ಚು ಇವರುಗಳನ್ನು ಒಳಗೊಂಡ ತಂಡ ಮೈಸೂರಿನಲ್ಲಿ ಸಿ.ಎಂ ಅವರನ್ನು ಭೇಟಿಯಾಗಿ ತಾಲೂಕು ರಚನೆಯ ಬಗ್ಗೆ ಸವಿಸ್ತಾರವಾದ ಮನವಿಯನ್ನು ನೀಡಲಾಗಿದೆ. ಆದರೆ ಮಾದ್ಯಮಗಳಲ್ಲಿ ಪೊನ್ನಂಪೇಟೆ ತಾಲೂಕು ರಚನೆಗೆ ಸಿ.ಎಂ ಸಿದ್ದರಾಮಯ್ಯ ತಾ.9 ರಂದು ಪೊನ್ನಂಪೇಟೆಗೆ ಭೇಟಿ ನೀಡಿ ಸ್ಥಳದಲ್ಲೆ ನಿರ್ಧಾರ ನೀಡುವದಾಗಿ ಪಕ್ಷದ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ ನೀಡಿರುವ ಮಾಹಿತಿ ತಪ್ಪು. ತಾ. 9 ಕ್ಕೆ ಸಿ.ಎಂ ಪೊನ್ನಂಪೇಟೆಗೆ ಭೇಟಿ ನೀಡುತ್ತಿಲ್ಲ. ಬದಲಾಗಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ತಪ್ಪು ಮಾಹಿಯನ್ನು ಸಂಬಂಧ ಪಟ್ಟವರು ನೀಡಬಾರದು ಎಂದು ಹೋರಾಟದ ಪ್ರಮುಖರು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ತಿತಿಮತಿ ಇಗ್ಗುತ್ತಪ್ಪ ಕೊಡವ ಕೂಟದ ಅಧ್ಯಕ್ಷ ಪ್ರಕಾಶ್ ಚೆಂಗಪ್ಪ ಮತ್ತು ಪಧಾದಿಕಾರಿಗಳು, ಹರಿಹರ ಗ್ರಾಮದ ಕೆ.ಎಂ ಕುಶಾಲಪ್ಪ, ಟಿ.ಸಿ ಪೂಣಚ್ಚ, ಟಿ.ಸಿ ಕುಶಾಲಪ್ಪ, ಎಂ.ಪಿ ಉತ್ತಯ್ಯ, ಟಿ.ಸಿ ಸುಬ್ಬಯ್ಯ, ಸೀತಮ್ಮ, ದೇಚಮ್ಮ ತಿತಿಮತಿ ಗ್ರಾ.ಪಂ ಅಧ್ಯಕ್ಷ ಶಿವಕುಮಾರ್, ಸಂಘಟನೆಗಳ ಪಧಾದಿಕಾರಿಗಳಾದ ಮನಿಯಪಂಡ ನಂಜಪ್ಪ, ಚೆಪ್ಪುಡಿರ ಕಾರ್ಯಪ್ಪ, ಪಾಲೆಂಗಡ ಮನು ನಂಜಪ್ಪ, ಹಾಗೂ ತಿತಿಮತಿ ನಾಗರಿಕರು, ಪೊನ್ನಂಪೇಟೆ ನಾಗರಿಕಾ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದರು.