ಕುಶಾಲನಗರ, ಡಿ. 1: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿಯಲ್ಲಿ ಶುಕ್ರವಾರ ಹೋಬಳಿ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಧರಣಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ಕೆ.ಬಿ.ಮೋಹನ್ ನೇತೃತ್ವದಲ್ಲಿ ಪದಾಧಿಕಾರಿಗಳು ಪಾಲ್ಗೊಂಡು ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ, ಸಮಾಜದ ಪ್ರಮುಖರಾದ ನಾರಾಯಣಾಚಾರ್, ರಾಜಾಚಾರ್, ಕುಮಾರ್, ದಿನೇಶ್, ವಿಜಯಕುಮಾರ್, ಅನ್ನಪೂರ್ಣಮ್ಮ, ಲಲಿತಾ, ಪ್ರಭಾವತಿ, ಹೋರಾಟ ಸಮಿತಿ ಪ್ರಮುಖರು ಇದ್ದರು.
ಕಾವೇರಿ ತಾಲೂಕು ಹೋರಾಟ ಸಮಿತಿಯಲ್ಲಿ ಇತ್ತೀಚೆಗೆ ಕಂಡುಬಂದಿರುವ ಗೊಂದಲಗಳನ್ನು ಚರ್ಚೆಗಳ ಮೂಲಕ ಪರಿಹರಿಸಿಕೊಳ್ಳಲಾಗುವದೆಂದು ಕೇಂದ್ರ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಸ್ಪಷ್ಟಪಡಿಸಿದ್ದಾರೆ. ಅವರು ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೋರಾಟ ಸಂದರ್ಭ ಸಮಿತಿಯ ಕೆಲವರ ನಡುವೆ ಭಿನ್ನಾಭಿಪ್ರಾಯ ಕಂಡುಬಂದಿದ್ದು ಸದ್ಯದಲ್ಲಿಯೇ ಸಭೆ ಕರೆದು ಚರ್ಚೆ ನಡೆಸಲಾಗುವದು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾವೇರಿ ತಾಲೂಕು ರಚನೆಯ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದೆಂದರು.
ಈ ಸಂದರ್ಭ ಉಪಸ್ಥಿತರಿದ್ದ ಸಮಿತಿಯ ಪ್ರಮುಖ ಎಂ.ವಿ.ನಾರಾಯಣ ಅವರು ಮಾತನಾಡಿ, ಹೋರಾಟ ಸಮಿತಿಯಲ್ಲಿ ಎಲ್ಲರನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಇಲ್ಲದಿದ್ದಲ್ಲಿ ಬಿಜೆಪಿ ತಮ್ಮ ಪಕ್ಷದ ಮೂಲಕ ಸರಕಾರದ ವಿರುದ್ಧ ಹೋರಾಟ ನಡೆಸಿ ಕಾವೇರಿ ತಾಲೂಕು ರಚನೆಗೆ ಒತ್ತಾಯಿಸುವ ಬಗ್ಗೆ ಚಿಂತನೆ ಹರಿಸಲಾಗುವದು ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಮುಂದಿನ ದಿನಾಂಕ 9 ರಂದು ತಾಲೂಕು ರಚನೆಗೆ ಒತ್ತಾಯಿಸಿ ಪ್ರಸ್ತಾವಿತ ತಾಲೂಕು ವ್ಯಾಪ್ತಿಯಲ್ಲಿ ಬಂದ್ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿ.ಪಿ.ಶಶಿಧರ್ ಮಾಹಿತಿ ನೀಡಿದರು.
ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರ, ಪ್ರಮುಖರಾದ ಟಿ.ಆರ್.ಶರವಣಕುಮಾರ್, ದೇವರಾಜ್ ಮತ್ತಿತರರು ಇದ್ದರು.